LatestMysore

ದಾಸೋಹ ಚಕ್ರವರ್ತಿ ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ ಮಾಡಿಸಿದ ವಚನ ಕುಮಾರಸ್ವಾಮಿ

ಮಂಡ್ಯ: ಕಾಯಕ ಮತ್ತು ದಾಸೋಹದ ಸಾಕಾರ ಮೂರ್ತಿ ಶ್ರೀ ಗುರುಮಲ್ಲೇಶ್ವರರು ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಬಸವಾದಿ ಶರಣರ ತತ್ವಗಳು, ವಚನ ಸಾಹಿತ್ಯದ ಸತ್ಸಂಗ ಹಾಗೂ ಸತ್ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ಸದುದ್ದೇಶದಿಂದ ಮಳವಳ್ಳಿಯ ಬೆಳದಿಂಗಳ ಶರಣರ ಚಿಂತನ ಮಂಥನ ಸಮಿತಿ ವತಿಯಿಂದ ಉಮಾದೇವಿ ಮತ್ತು ಪುಟ್ಟಸುಬ್ಬಪ್ಪನವರ ಗೃಹಾವರಣದಲ್ಲಿ ಆಯೋಜಿಸಲಾಗಿದ್ದ 143ನೇ ಬೆಳದಿಂಗಳ ಶರಣರ ಚಿಂತನ ಮಂಥನ ಕಾರ್ಯಕ್ರಮದಲ್ಲಿ  ದಾಸೋಹ ಚಕ್ರವರ್ತಿ ಶ್ರೀ ಗುರುಮಲ್ಲೇಶ್ವರರ ಜೀವನ ದರ್ಶನ ವಿಷಯ ಕುರಿತು ಪ್ರವಚನ ನೀಡಿ ಮಾತನಾಡಿದರು.

ಶ್ರೀ ಗುರುಮಲ್ಲೇಶ್ವರರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಸಮೀಪದ ಚವಳಂಗೆ ಗ್ರಾಮದ ಶರಣಪ್ಪ ಮತ್ತು ಶರ್ವಾಣಮ್ಮ ದಂಪತಿಗಳ ಪುಣ್ಯಪುತ್ರರಾಗಿ ಜನಿಸಿ, ಬಾಲ್ಯದಲ್ಲೇ ಮಠದ ಸಂಸ್ಕಾರ ಪಡೆದು ಬೆಳೆದವರು. ಬಸವ ಶರಣಪ್ಪ ಸ್ವಾಮಿಗಳು ಮತ್ತು ಬೆತ್ತಲಗುಂಡದ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅವರು ನಡೆದುಬಂದ ಹಾದಿ ಇಡೀ ಸಮಾಜಕ್ಕೆ ಮಾದರಿಯಾಗಿದೆ.

ತೀರ್ಥಕ್ಷೇತ್ರಗಳಿಗೆ ಹೋಗಲು ಆಹ್ವಾನಿಸಿದ ಸ್ನೇಹಿತರಿಗೆ ತಮ್ಮ ಪ್ರತಿನಿಧಿಯಾಗಿ ಹಾಗಲಕಾಯಿಯನ್ನು ನೀಡಿ, ಯಾತ್ರೆ ಮುಗಿಸಿ ಬಂದ ಮೇಲೆ ಅದನ್ನು ಸವಿಯಲು ನೀಡಿದ ಪ್ರಸಂಗವನ್ನು ಸ್ಮರಿಸುತ್ತಾ, ಹೊರಗಿನ ನದಿಗಳಲ್ಲಿ ಎಷ್ಟೇ ಸ್ನಾನ ಮಾಡಿದರೂ ಹಾಗಲಕಾಯಿಯ ಕಹಿ ಹೋಗದಂತೆ, ಮನುಷ್ಯ ತನ್ನ ಅಂತರಂಗದ ಅಹಂಕಾರ, ದ್ವೇಷ, ಸ್ವಾರ್ಥವನ್ನು ತೊರೆಯದಿದ್ದರೆ ಯಾವುದೇ ಕ್ಷೇತ್ರ ದರ್ಶನದಿಂದ ಫಲವಿಲ್ಲ. ಭಕ್ತನ ಹೃದಯವೇ ನಿಜವಾದ ಕಾಶಿ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು.

ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರು ಅರಮನೆಗೆ ಆಹ್ವಾನಿಸಿ ಚಿನ್ನ-ವಜ್ರಗಳನ್ನು ನೀಡಲು ಮುಂದಾದಾಗ, ಇದು ಪ್ರಜೆಗಳ ಬೆವರಿನ ಸಂಪತ್ತು, ಅದನ್ನು ಕಾಯಕದಿಂದ ಸಂಪಾದಿಸಿ ದಾಸೋಹ ಮಾಡು ಎಂದು ರಾಜನಿಗೇ ಕಾಯಕದ ಅರಿವು ಮೂಡಿಸಿದ ದಾಸೋಹ ಚಕ್ರವರ್ತಿಗಳ ನಿರಾಡಂಬರತೆಯನ್ನು ಕೊಂಡಾಡಿದರು. ರಾಜನೊಬ್ಬ ಸಾಮಾನ್ಯ ಕಮ್ಮಾರನ ಬಳಿ ಹೋಗಿ ದುಡಿದು ನಾಲ್ಕಾಣೆ ಗಳಿಸಿ ತಂದು ಗುರುಗಳ ಮುಂದೆ ಇಟ್ಟ ಐತಿಹಾಸಿಕ ಘಟನೆಯನ್ನು ವಿವರಿಸಿದರು.

ನಿಜವಾದ ಗುರುವಿನ ಹುಡುಕಾಟದಲ್ಲಿದ್ದ ಮೌಲಾನಾ ಪೀರ ದೇವನೂರಿಗೆ ಬಂದಾಗ, ಗುರುಗಳು ನನ್ನ ಶಿಷ್ಯ ಬರುತ್ತಿದ್ದಾನೆ, ಶಿಷ್ಯತ್ವ ಹಾಗೂ ಭಕ್ತಿಗೆ ಜಾತಿ-ಮತಗಳ ಹಂಗಿಲ್ಲ ಎಂದು ಪ್ರೀತಿಯಿಂದ ಅಪ್ಪಿಕೊಂಡರು. ಗುರುವಿನ ದಿವ್ಯ ದರ್ಶನ, ಕರುಣೆ ಹಾಗೂ ಅಂತರಂಗದ ಬೋಧನೆಯಿಂದ ಮೌಲಾನಾ ಪೀರನ ಹೃದಯದಲ್ಲಿ ಗುರುಭಕ್ತಿ ಮತ್ತಷ್ಟು ಗಾಢವಾಯಿತು.

ಆ ಅತ್ಯಾನಂದದ ಕ್ಷಣದಲ್ಲಿ ಅವನ ಬಾಯಿಂದ ಸಹಜವಾಗಿ ಹೊರಬಂದ ದಿವ್ಯ ನುಡಿಯೇ ಅಲಕ್ ನಿರಂಜನ ಗುರುಮಲ್ಲೇಶ್ವರ ಮಹಾಪ್ರಭು ಇಂದು ನಾವೆಲ್ಲರೂ ಗುರುಮಲ್ಲೇಶ್ವರರನ್ನು ಸ್ಮರಿಸುವಾಗ ಉದ್ಘೋಷಿಸುವ ಅಲಕ್ ನಿರಂಜನ ಎಂಬ ಪವಿತ್ರ ಜಯಘೋಷದ ಹಿಂದೆ, ಜಾತಿ-ಮತಗಳನ್ನು ಮೀರಿದ ಈ ಅಪೂರ್ವ ಗುರುಭಕ್ತಿಯ ಮಹಾನ್ ಕಥೆಯಿದೆ. ಅಂತಿಮ ಕ್ಷಣದಲ್ಲೂ ತಮ್ಮ ಉತ್ತರಾಧಿಕಾರಿ ಭಿಕ್ಷದ ರಾಚಪ್ಪಸ್ವಾಮಿಗಳವರಿಗೆ ತಮ್ಮನ್ನು ಸ್ಮರಿಸಿಕೊಳ್ಳಲು ಹೇಳದೆ, ಸಮಸ್ತ ಜೀವಜಾಲವನ್ನು ನನ್ನಂತೆ ಕಾಣು ಎಂದು ಶಿಷ್ಯರಿಗೆ ನೀಡಿದ ಕಡೆನುಡಿ ಇಂದಿಗೂ ಪ್ರಸ್ತುತ ಎಂದರು.

ಕಾರ್ಯಕ್ರಮದಲ್ಲಿ ಹೊಸಹಳ್ಳಿ ಶ್ರೀ ಸಿದ್ಧಮಲ್ಲೇಶ್ವರ ಪಟ್ಟದ ಮಠದ ಶ್ರೀ ಓಂಕಾರಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪರಶಿವಮೂರ್ತಿ ಅವರು ಶರಣ ವಚನಗಳೊಂದಿಗೆ ಪ್ರಾರ್ಥನೆ ಸಲ್ಲಿಸಿ ಸಭೆಗೆ ಆಧ್ಯಾತ್ಮಿಕ ಕಳೆ ತಂದರು. ನಿವೃತ್ತ ಶಿಕ್ಷಕ ಮಲ್ಲೇಶಣ್ಣ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸಮಿತಿಯ ವತಿಯಿಂದ ಆಗಮಿಸಿದ ಅತಿಥಿಗಳಿಗೆ ಹಾಗೂ ಶರಣರಿಗೆ ಅತ್ಯಂತ ಪ್ರೀತಿಯಿಂದ ದಾಸೋಹ ವ್ಯವಸ್ಥೆಯನ್ನು ಆರ್.ಬಿ. ಹಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ವಿಶಾಲಾಕ್ಷಿ ಹಾಗೂ ದೊಡ್ಡಬೂಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಚ್.ಎಂ. ನಾಗೇಂದ್ರಮೂರ್ತಿ ನೆರವೇರಿಸಿ ಸತ್ಕರಿಸಿದರು. ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ