ArticlesLatestLife style

ಯೋಗದ ಸಿರಿ ಬೆಳಕಿನಲ್ಲಿ ಮೈಸೂರು….  ಯೋಗನಗರಿ ಮೈಸೂರು ದೇಶದ ಹೆಮ್ಮೆ… ಇತಿಹಾಸದ ಮೆಲುಕು!

ಜೂನ್ 21, 'ವಿಶ್ವ ಯೋಗ ದಿನ'

ಇವತ್ತು ಯೋಗ ವಿಶ್ವವಿಖ್ಯಾತವಾಗಿದೆ.. ಯೋಗದ ನಂಟು ಮೈಸೂರಿನಿಂದಲೇ ಆರಂಭವಾಗುತ್ತದೆ..  ಯೋಗ ಮತ್ತು ಮೈಸೂರು ಅದರಾಚೆಗಿನ ವಿಚಾರಗಳ ಕುರಿತಂತೆ ಹಿರಿಯ ಸಾಹಿತಿ, ಪತ್ರಕರ್ತರೂ ಆಗಿರುವ ಬನ್ನೂರು ಕೆ.ರಾಜು ಇಲ್ಲಿ ಬರೆದಿದ್ದಾರೆ… ಒಮ್ಮೆ ಓದಿ ಬಿಡಿ…

“ಮನಸ್ಸು ದೇಹ ಮತ್ತು ಆತ್ಮಗಳ ಆರೋಗ್ಯಕ್ಕೆ ಇಂದು ಅನಿವಾರ್ಯವಾಗಿರುವ ಭಾರತದ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು. ಜೂನ್ 21ನ್ನು ‘ವಿಶ್ವ ಯೋಗ ದಿನ’ ವನ್ನಾಗಿ ಘೋಷಿಸಬೇಕು….” ಇದು ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಾವಷ್ಟೇ ಸ್ವಾಸ್ಥ್ಯದಿಂದಿದ್ದರೆ ಸಾಲದು. ಇಡೀ ವಿಶ್ವವೇ ಸ್ವಾಸ್ಥ್ಯದಿಂದ ಇರಬೇಕೆಂಬ ಸದಾಶಯದಿಂದ 2015ರಂದು ನಡೆದ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದರು. ಅವರ ಒತ್ತಾಯ ವ್ಯರ್ಥವಾಗಲಿಲ್ಲ. ವಿಶ್ವಸಂಸ್ಥೆ ಒಪ್ಪಿಕೊಂಡಿತು. ಅಷ್ಟೇ ಅಲ್ಲ, ಕೂಡಲೇ ಕಾರ್ಯೋನ್ಮುಖವೂ ಆಯಿತು.

ಇಂಥಾ ಯೋಗ ವಿದ್ಯೆ ಒಂದು ಕಾಲದಲ್ಲಿ ಇಡೀ ಭರತ ಭೂಮಿಯಲ್ಲಿ ಯೋಗಾ ಯೋಗವೆಂದು ಮೆರೆದರೂ ನಂತರದ ಕಾಲಘಟ್ಟಗಳಲ್ಲಿ ಅಂದರೆ ಕಳೆದ ಹಲವು ಶತಮಾನಗಳಿಂದ  ಮಸುಕಾಗಿ ಹೋಗಿತ್ತು. ಆದರೆ ಭಾರತದ ಪ್ರಾಚೀನ ಯೋಗ ವಿದ್ಯೆಯ ಮಹಾಬೆಳಕು ಒಮ್ಮೆಗೇ ಪ್ರಜ್ವ ಲಿಸಿಕೊಂಡು ಮತ್ತೆ ಬಂದದ್ದು 2015 ಜೂನ್21ರಂದು. ಅಂದು  ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಯೋಗಕ್ಕೆ ಜೈಕಾರ ಹಾಕಿದ್ದೇ ಹಾಕಿದ್ದು. ದೃಶ್ಯ ಮತ್ತು ಮುದ್ರಣ ಮಾಧ್ಯಮದಿಂದ ಹಿಡಿದು ಫೇಸ್ಬುಕ್, ಟ್ಯೂಟರ್, ವಾಟ್ಸಪ್, ಇನ್ಸ್ಟ್ರಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಲ್ಲೂ ಯೋಗವೇ! ಪ್ರಪಂಚ ಪೂರ್ತಿ ಯೋಗ ಮಹಿಮೆಯ ಸಮೂಹ ಸನ್ನಿಗೆ ಒಳಗಾಗಿತ್ತು.

ಇದಕ್ಕೆ ಕಾರಣ ಆ ದಿನವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮತ್ತು ಒತ್ತಾಯದ ಮೇರೆಗೆ ವಿಶ್ವಸಂಸ್ಥೆಯು ‘ವಿಶ್ವ ಯೋಗ ದಿನ’ ಎಂದು ಇಡೀ ಪ್ರಪಂಚವೇ ಆಚರಿಸಲು ಘೋಷಿಸಿತ್ತು. ಭಾರತೀಯರಿಗಂತೂ ಆದಿನ ಎಲ್ಲಿಲ್ಲದ ಸಂತಸ ತಂದಿತ್ತು. ಹರ್ಷದಿಂದ ಕುಣಿ ಕುಣಿದಾಡುವಂತೆ ನಲಿ ನಲಿದಾಡುವಂತೆ ಮಾಡಿತ್ತು. ಭಾರತೀಯರು ಗರ್ವದಿಂದ ತಲೆಯೆತ್ತಿ ಎದೆಯುಬ್ಬಿಸಿ ತಮ್ಮ ಸನಾತನ ಪ್ರಾಚೀನ ಪರಂಪರೆಗೆ ಆಧುನಿಕ ಯುಗದಲ್ಲೂ ಎಂಥಾ ಮನ್ನಣೆ, ಎಂಥಾ ಗೌರವ ದೊರೆತಿದೆ ಎಂದು ಜಗತ್ತಿಗೆ ಸಾರಿ ಸಾರಿ ಹೇಳಿ ಹಿರಿಹಿರಿ ಹಿಗ್ಗಿದ ದಿನವದು.

ಯೋಗದ ಮೂಲಕ ನಮ್ಮ ಭವ್ಯ ಭಾರತವು ವಿಶ್ವ ಗುರುವಾಗಿ ಭೂಮ್ಯಾಗಸದ ಉದ್ದಗಲಕ್ಕೂ ಯೋಗ ವಿದ್ಯೆಯ ಮಹಾ ಬೆಳಕನ್ನು ಶಾಶ್ವತವಾಗಿ ಹರಡಿ ಜಗಜ್ಯೋತಿಯಾಗಿದೆ ಎಂದು ಪ್ರತಿಯೊಬ್ಬ ಭಾರತೀಯನೂ ‘ನಮ್ಮ ಭಾರತ ನಮ್ಮ ಹೆಮ್ಮೆ’ ಎಂದು ಗರ್ವದಿಂದ ಹೇಳುವ ದಿನವಿದು. ಅದೇ  ‘ಅಂತಾರಾಷ್ಟ್ರೀಯ ಯೋಗ ದಿನ’

ವಿಶ್ವಸಂಸ್ಥೆ ಜೂನ್ 21 ನ್ನು ‘ವಿಶ್ವ ಯೋಗ ದಿನ’ ಎಂದು ಘೋಷಿಸಿದ ಘಳಿಗೆಯಿಂದಲೇ ನಮ್ಮ ಪ್ರಾಚೀನ ಭಾರತದ ಯೋಗದ ಮಹತ್ವ ಮತ್ತು ತಾಕತ್ತಿನ ಮೈಲೇಜ್ ಶರವೇಗದಲ್ಲಿ ವಿಶ್ವದಾದ್ಯಂತ  ಏರತೊಡಗಿತು. ನಮ್ಮ ಭಾರತದಲ್ಲಂತೂ ಕೇಂದ್ರ ಸರ್ಕಾರ ಯೋಗ ದಿನವನ್ನು ಆಚರಿಸಲು ಜನರಿಗೆ ಕರೆ ಕೊಟ್ಟಿದ್ದೇ ತಡ ಯೋಗವೆಂಬುದು ಪ್ರತಿಯೊಬ್ಬರ ಯೋಗವೇ ಆಗಿ ಹೋಯಿತು. ಹಳ್ಳಿಯಿಂದ  ಹಿಡಿದು ದಿಲ್ಲಿಯ ತನಕ ಗುಡಿ-ಗುಡಿಸಲುಗಳು, ಶಾಲೆ-ಕಾಲೇಜುಗಳು, ಧಾರ್ಮಿಕ ಆಶ್ರಮ-ಅನಾಥಾಶ್ರಮಗಳು, ಕೆರೆ-ಕೆರೆ ಏರಿಗಳು, ಉದ್ಯಾನ – ಮೈದಾನಗಳು, ಪಾರ್ಕು-ಪಡಸಾಲೆಗಳು, ಕಟ್ಟೆ-ಅರಳಿ ಕಟ್ಟೆಗಳು ಹೀಗೆ ಇವೆಲ್ಲವೂ ಯೋಗ ಪಟುಗಳ ಆಸನಗಳಿಗೆ ತಾಣಗಳಾದವು. ಹಾಗೆಯೇ ಆಧುನಿಕತೆಗೆ ತಕ್ಕಂತೆ ತರಾವರಿ ಯೋಗ ಶಾಲೆಗಳು ಹುಟ್ಟಿಕೊಂಡವು.

ಜೂನ್ 21ರ ದಿನವೇ ಏಕೆ: ವಿಶೇಷವೆಂದರೆ ಜೂನ್ 21 ದಕ್ಷಿಣಾಯನ ದಿನ. ಈ ದಿನ ಹಗಲು ಬಹಳ ದೀರ್ಘವಾಗಿರುತ್ತದೆ. ಈ ದಿನದ ನಂತರ ಸೂರ್ಯ ದಕ್ಷಿಣದತ್ತ ಸಾಗಿ ಹಗಲಿನ ಅವಧಿ ಕಡಿಮೆಯಾಗುತ್ತಾ ಹೋಗಿ ಡಿಸೆಂಬರ್ 1ರ ಹೊತ್ತಿಗೆ ಉತ್ತರಾಯಣ ಗತಿ ತಲುಪುತ್ತದೆ. ಇದು ಅತ್ಯಂತ ದೀರ್ಘವಾದ ರಾತ್ರಿಯ ದಿನ. ಹಾಗಾಗಿ ದೀರ್ಘ ಹಗಲು ಎನ್ನುವ ಕಾರಣದಿಂದ ಜೂನ್ 21ನ್ನೇ ವಿಶ್ವ ಯೋಗ ದಿನ ಎಂದು  ಘೋಷಿಸ ಬೇಕೆಂದು ಪ್ರಧಾನಿ ಮೋದಿ ಸಾರಥ್ಯದ ಭಾರತ ಸರ್ಕಾರ ವಿಶ್ವಸಂಸ್ಥೆಗೆ  ಸಲಹೆಯೊಡನೆ ಮನವಿ ಮಾಡಿತ್ತು. ಇದರಲ್ಲಿ ಭಾರತ ಸಂಪೂರ್ಣ ಯಶಸ್ವಿಯೂ ಆದದ್ದು ಈಗ ಇತಿಹಾಸ.

ಯೋಗವೆಂದರೆ ಬಹಳ ಸರಳವಾಗಿ ಹೇಳುವುದಾದರೆ ಬರೀ ದೈಹಿಕ ಕಸರತ್ತಲ್ಲ. ಅಥವಾ ಕೇವಲ ಶಾರೀರಿಕ ವ್ಯಾಯಾಮವಲ್ಲ. ಅದು ಹೂ ವಂತೆ ಮನಸ್ಸನ್ನು ಅರಳಿಸುವ ಅನನ್ಯತೆಯ ಸಂಭ್ರಮದ ಸಾಧನ. ಯೋಗಾಸನಗಳಿಂದ, ಯೋಗ ಕಲಿಕೆಯಿಂದ ಬಾಹ್ಯ ಪ್ರಪಂಚವನ್ನು ನೋಡುವ ನಮ್ಮ ದೃಷ್ಟಿಕೋನ ಮಾತ್ರ ಬದಲಾಗುವುದಿಲ್ಲ. ಅಸಲಿಗೆ ನಮ್ಮೊಳಗೆ ನಾವೇ ಬದಲಾಗುತ್ತೇವೆ. ಹಾಗಾಗಿ ಆತ್ಮಶುದ್ಧಿಗಾಗಿ, ದೇಹ ಸ್ವಾಸ್ಥ್ಯಕ್ಕಾಗಿ, ಒಟ್ಟಾರೆ ಸಕಲ ಸ್ವಾಸ್ಥ್ಯಕ್ಕೂ ಯೋಗವೇ ಸಂಜೀವಿನಿ. ಇಂಥಾ ಯೋಗ ವಿದ್ಯೆಯ ಮೂಲಪುರುಷ ಯೋಗ ಪಿತಾಮಹ ಪತಂಜಲಿ ಮಹರ್ಷಿಗಳು ನಮ್ಮ ಭಾರತೀಯರೆಂಬುದೇ ಒಂದು ಹೆಗ್ಗಳಿಕೆ. ಹಾಗೆಯೇ ಸಮಸ್ತ ಭಾರತೀಯರೆಲ್ಲರ ಹೆಚ್ಚುಗಾರಿಕೆ.

ಜಗದಲ್ಲಿ ಇಂದು ಯೋಗ ಎಂದ ತಕ್ಷಣ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತದೆ. ಹಾಗೆಯೇ ಭಾರತದಲ್ಲಿ ಯೋಗದ ಹೆಸರನ್ನು ಹೇಳಿದರೆ ಸಾಕು ಇಡೀ ಭಾರತ ಮೈಸೂರು ನಗರದತ್ತ ಮುಖ ಮಾಡುತ್ತದೆ. ಏಕೆಂದರೆ ಬಹುಮುಖ್ಯವಾಗಿ ಯೋಗವಿದ್ಯೆಯ ಮೂಲನೆಲೆ ಮೈಸೂರು. ಒಂದು ರೀತಿ ಹಿನ್ನೆಲೆಗೆ ಸರಿದಿದ್ದ ಪ್ರಾಚೀನ ಭಾರತದ ಯೋಗವನ್ನು ಪುನಶ್ಚೇತನಗೊಳಿಸಿ ಅದನ್ನು ಮುನ್ನೆಲೆಗೆ ತಂದದ್ದೇ ಮೈಸೂರು. ಆದ್ದರಿಂದಲೇ 2022ನೇ ವರ್ಷದ ವಿಶ್ವ ಯೋಗ ದಿನಾಚರಣೆ ಮೈಸೂರಿನಲ್ಲಿ ಅದೂ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಅಂಗಳದಲ್ಲಿ ನಮ್ಮ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಜರುಗಿದ್ದು ಅತ್ಯಂತ ಅರ್ಥಪೂರ್ಣ ಹಾಗೂ ಮಹತ್ವದ್ದಾಗಿ ಇಂದಿಗೂ ಅವಿಸ್ಮರಣೀಯವಾಗಿದೆ.

ಮೈಸೂರು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಶೈಕ್ಷಣಿಕ ನಗರಿ, ಸಾಹಿತ್ಯಕ ನಗರಿ, ಸ್ವಚ್ಛತಾ ನಗರಿ, ಚಾರಿತ್ರಿಕ ನಗರಿ ಹೇಗೋ ಹಾಗೆಯೇ ಮೈಸೂರು ‘ಯೋಗ ನಗರಿ’ಯೂ ಹೌದು! ಅಷ್ಟೇ ಅಲ್ಲ, ಮೈಸೂರು ಸಾಂಸ್ಕೃತಿಕ ರಾಜಧಾನಿಯೂ ನಿಜ. ಯೋಗ ಮಹಿಮೆಯಿಂದ ಈಗ ಮೈಸೂರನ್ನು ಯೋಗ ರಾಜಧಾನಿ ಎಂದೂ ಕರೆಯಲಾಗುತ್ತಿದೆಯೆಂದರೆ ಯಾರಾದರೂ ಊಹಿಸಬಹುದು ಮೈಸೂರು ನಗರದ ಯೋಗ ವಿದ್ಯೆಯ ಶಕ್ತಿಯನ್ನು ಮತ್ತು ಅದು ವ್ಯಾಪಿಸಿಕೊಂಡಿರುವ ವಿಶಾಲ ವ್ಯಾಪ್ತಿಯನ್ನು.’ಯೋಗ’ ಎಂದ ತಕ್ಷಣ ಮೈಸೂರಿನ ಯೋಗ ವಿದ್ಯೆಯ ಚರಿತ್ರೆಯ ಚಕ್ರ ಸುಮಾರು ಎರಡು ಶತಮಾನಗಳ ಹಿಂದಕ್ಕೆ ಓಡುತ್ತದೆ.

ಏಕೆಂದರೆ ಶತಮಾನಗಳ ಹಿಂದೆಯೇ ಆಚಾರ್ಯ ಪುರುಷರು, ಋಷಿ ಮುನಿಗಳು, ದಾರ್ಶನಿಕರು, ಯೋಗಾಚಾರ್ಯರು,ಯೋಗ ತಪಸ್ವಿಗಳು ಯೋಗದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಮೈಸೂರು ಇಂದು ಯೋಗ ರಾಜಧಾನಿಯಾಗಿ ವಿಶ್ವದ ಎಲ್ಲಾ ರಾಷ್ಟ್ರಗಳ ಯೋಗಾಸಕ್ತರನ್ನು ಆಕರ್ಷಿಸಿ ಕೈಬೀಸಿ ಕರೆಯುತ್ತಿರುವುದಕ್ಕೆ ಬಹು ಮುಖ್ಯ ಕಾರಣ ಯೋಗರ್ಷಿ ಪತಂಜಲಿಯ ಯೋಗ ವಿದ್ಯೆಯನ್ನು ಸ್ವತ: ತಾವು ತಿಳಿದುಕೊಂಡು ಎಲ್ಲರಿಗೂ ಅದನ್ನು ಕಲಿಸಿ ಯೋಗದ ಮಹಿಮೆಯನ್ನು ಮೈಸೂರು ಮತ್ತು ಮೈಸೂರಿನಿಂದಾಚೆಗಿನ  ಜಗತ್ತಿಗೆ ಸಾರಿದ ಯೋಗರಾಜ ತಿರುಮಲೆ ಕೃಷ್ಣಮಾಚಾರ್ಯರು.

ಇಂದು ಮೈಸೂರಿನಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ನಾನಾ ದೇಶಗಳಲ್ಲಿ ಯೋಗವನ್ನು ಕಲಿಸುತ್ತಿರುವ ಗುರುಗಳು, ಕಲಿಯುತ್ತಿರುವ ಶಿಷ್ಯರೂ ಕೃಷ್ಣಮಾಚಾರ್ಯರ ಶಿಷ್ಯ ಪರಂಪರೆಗೆ ಸೇರಿದ ಶಿಷ್ಯಕೋಟಿಯೇ ಆಗಿದ್ದಾರೆ. ಇಲ್ಲಿ ಪಾಶ್ಚಾತ್ಯ ಶಿಷ್ಯರ ಪಟ್ಟಿಯೂ ಬಹು ದೊಡ್ಡದಿದೆ. ಮೈಸೂರು ಸಂಸ್ಥಾನವನ್ನು ಆಳಿದ ಮಹಾರಾಜರುಗಳು ನಮ್ಮ ಪ್ರಾಚೀನ ಯೋಗ ವಿದ್ಯೆಗೆ ವಿಶೇಷವಾದ ಪ್ರೋತ್ಸಾಹ ನೀಡಿದ್ದರು. 1794ರಿಂದ 1868ರ ಅವಧಿಯಲ್ಲಿ ಮೈಸೂರಿನ ಮಹಾರಾಜರಾಗಿ ಆಳ್ವಿಕೆ ನಡೆಸಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಕಲೆ, ಸಾಹಿತ್ಯ, ನಾಟಕ, ನೃತ್ಯ, ಸಂಗೀತದಂತೆ ಯೋಗಕ್ಕೂ ಅಪಾರ ಪ್ರೋತ್ಸಾಹ ನೀಡಿದ್ದರು. ಸ್ವತಃ ಇವರೇ ಯೋಗಾಸನ ಮಾಡುತ್ತಿದ್ದು ವಿಶೇಷವಾಗಿ ಅವರು ಹಠಯೋಗದಲ್ಲಿ ಆಸಕ್ತರಾಗಿದ್ದು ಯೋಗ ಸಾಧಕರಾಗಿದ್ದರು.

ಸ್ವತಃ ಅವರೇ ರಚಿಸಿ ಅವರ ಕಾಲದಲ್ಲಿ ಪ್ರಕಟಗೊಂಡ ‘ಶ್ರೀತತ್ವ ನಿಧಿ’ ಎನ್ನುವ ಕೃತಿ ಇದನ್ನು ಸಾಕ್ಷೀಕರಿಸುತ್ತದೆ. ಅವತ್ತಿನ ಕಾಲದಲ್ಲಿಯೇ 120ಕ್ಕೂ ಹೆಚ್ಚು ಯೋಗದ ಭಿನ್ನ ಆಸನಗಳನ್ನು ಒಳಗೊಂಡ ವಿವರಣಾತ್ಮಕ ಸಚಿತ್ರ ಕೃತಿ ಇದಾಗಿದೆ. ಮುಮ್ಮಡಿಯ ನಂತರ ಮುಂದೆ 1894ರಂದು ಪಟ್ಟಕ್ಕೆ ಬಂದು ಸುದೀರ್ಘಕಾಲ ರಾಜ್ಯಭಾರ ಮಾಡಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಭಾಗದಲ್ಲಿ ಯೋಗ ಇನ್ನಷ್ಟು ಜನಪ್ರಿಯಗೊಂಡಿತು. ಯೋಗಾಸಕ್ತರ ಮತ್ತು ಯೋಗ ಪಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿತು.

ಮೊದಲ ಯೋಗ ಶಾಲೆ ಆರಂಭ: ಯೋಗಗುರುಗಳಾದಶ್ರೀರಂಗಗುರುಗಳು,ಹಾಗೂ ಶ್ರೀದೇಶಿಕಾಚಾರ್ ಕೂಡ ಯೋಗವನ್ನು ಜನಪ್ರಿಯ ಗೊಳಿಸಿದವರ ಸಾಲಿನಲ್ಲಿ ನಿಲ್ಲುತ್ತಾರೆ. ಯೋಗ ಗುರುಗಳಾಗಿದ್ದ ಟಿ. ಕೃಷ್ಣಮಾಚಾರ್ಯ ಅವರು 1930ರ ವೇಳೆಗೆ ಮಹಾರಾಜರ ಆಶ್ರಯದೊಂದಿಗೆ ಮೈಸೂರು ನಗರದ ಸುಪ್ರಸಿದ್ಧ ಸಯ್ಯಾಜಿರಾವ್ ರಸ್ತೆಯಲ್ಲಿ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮೊದಲಿಗೆ ಯೋಗ ಶಾಲೆ ಆರಂಭಿಸಿದ್ದರು. ನಂತರ ವಿವಿಧೆಡೆ ಯೋಗ ಶಾಲೆಗಳ ಪ್ರಾರಂಭಕ್ಕೆ ನಾಂದಿಯಾಡಿ ಯೋಗವನ್ನು ಮೈಸೂರು ನಗರದಿಂದ ಭಾರತದಾಚೆಗೂ ಆನಂತರ ಪ್ರಪಂಚದಾದ್ಯಂತ ಪಸರಿಸಲು ಕಾರಣರಾಗಿದ್ದಾರೆ. ಇವರ ಶಿಷ್ಯರಾಗಿ ಬೆಳೆದು ಬಂದ ಪಟ್ಟಾಭಿ ಜೋಯಿಸ್ ಹಾಗೂ ಬಿಕೆಎಸ್ ಅಯ್ಯಂಗಾರ್ ಈ ಪರಂಪರೆ ಮುಂದುವರಿಸಿದರು.

ಅಷ್ಟಾಂಗ ಯೋಗದ ಮೂಲಕ ಪಟ್ಟಾಭಿಜೋಯಿಸ್ ಜನಪ್ರಿಯರಾದರೆ, ಬಿಕೆಎಸ್ ಅಯ್ಯಂಗಾರ್ ಕೆಲವು ಹಠ ಯೋಗಗಳ ಪಟ್ಟುಗಳನ್ನು ಪರಿಚಯಿಸಿದರು. ಪ್ರಾಚೀನ ಯೋಗಕ್ಕೆ ತಮ್ಮದೇ ಆದ ವಿನೂತನ ಆಸನಗಳನ್ನು  ಆವಿಷ್ಕರಿಸಿ ನಾವಿನ್ಯ ಸ್ಪರ್ಶ ನೀಡಿದರು.ಈಗ ಪಟ್ಟಾಭಿಜೋಯಿಸ್ ಪುತ್ರಿ ಸರಸ್ವತಿ, ಮೊಮ್ಮಗ ಶರತ್ ಪಟ್ಟಾಭಿ ಯೋಗ ಮುಂದುವರಿಸಿದ್ದರೆ, ಬಿಕೆಎಸ್ ಅಯ್ಯಂಗಾರ್ ಅವರ ಮಕ್ಕಳಾದ ಗೀತಾ,ಪ್ರಶಾಂತ್, ಮೊಮ್ಮಕ್ಕಳಾದ ಅಭಿಜಿತ್ ಶ್ರೀಧರ್ ಹಾಗೂ ಹರಿತಾ ಶ್ರೀಧರ್ ಮತ್ತು ಶಿಷ್ಯರಾದ ರಾಘವೇಂದ್ರ ಪೈ, ಭರತ್‌ಶೆಟ್ಟಿ ಮುಂತಾದವರು ಅವರ ಯೋಗ ಪರಂಪರೆಯನ್ನು ಕಾಯ್ದುಕೊಂಡಿದ್ದಾರೆ.

ಮೈಸೂರು ಮೂಲದಿಂದ ಯೋಗ ವಿದ್ಯೆಯನ್ನು ಜಗದ್ವಿಖ್ಯಾತಿ ಮಾಡಿದವರಲ್ಲಿ ಸಿಂಹಪಾಲು ಪಡೆದಿರುವ ಬಿಕೆಎಸ್ ಅಯ್ಯಂಗಾರ್ ಅವರು ಯೋಗ ಕುರಿತಂತೆ ಉಪಯುಕ್ತವಾದ ಅನೇಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ.ಅವು ವಿಶ್ವದ ಅನೇಕ ಭಾಷೆಗಳಿಗೆ ಅನುವಾದಗೊಂಡು ಯೋಗದ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿವೆ.

ಯೋಗದ ಹೊಸ ಟ್ರೆಂಡ್: ಇದರೊಟ್ಟಿಗೆ ಕೆಲ ಯೋಗ ಸಂಸ್ಥೆಗಳು ತಮ್ಮದೇ ಆದ ತರಬೇತಿ ಕೇಂದ್ರಗಳನ್ನು ಹೊಂದಿದ್ದು, ಮೈಸೂರಿಗೆ ಯೋಗ ಅರಸಿ ಬರುವ ವಿದೇಶಿಯರಿಗೆ ಹಾಗೂ ದೇಶಿಯರಿಗೆ ಯೋಗ ಕಲಿಸುತ್ತಿವೆ. ಇವರೇ ವಿದೇಶಕ್ಕೆ ತೆರಳಿ ಯೋಗ ಹೇಳಿಕೊಟ್ಟು ಬರುವುದು ಇತ್ತೀಚಿನ ದಶಕದ ಹೊಸ ಟ್ರೆಂಡ್ ಆಗಿ ಪರಿವರ್ತನೆಯಾಗಿದೆ. ಭಾರತದ ಯೋಗ ವಿದ್ಯೆಗೆ ಮಾರುಹೋಗಿ ಇಲ್ಲಿಗೆ ಬರಲಾಗದ ಅದೆಷ್ಟೋ ಯೋಗಾಸಕ್ತರಿಗೆ ಇದೊಂದು ವರದಾನವಾಗಿದೆ.

ಮೈಸೂರಿನ ಲ್ಲಿ ಯೋಗವನ್ನು ವಿದೇಶಿಯರಿಗೆ ಹೇಳಿಕೊಡುವ ಪರಂಪರೆಯಷ್ಟೇ ವಿದೇಶಗಳಿಗೆ ಹೋಗಿ ಸೇವಾ ಮನೋಭಾವದಿಂದ ಅಲ್ಲಿಯೇ ಯೋಗವಿದ್ಯೆ ಕಲಿಸಿ ಈಗಲೂ ಯೋಗವನ್ನು  ಬೆಳೆಸುತ್ತಿರುವ ದೊಡ್ಡ ಪಡೆಯೇ ಮೈಸೂರಿನಲ್ಲಿ ಇದೆ. ಯಾವುದೇ ದೇಶಗಳಲ್ಲಾಗಲಿ ನಮ್ಮ ಯೋಗವನ್ನು ಕಲಿಯಲು ಬಯಸಿದರೆ ಸಾಕು ಅಲ್ಲಿಗೇ ಹೋಗಿ ಯೋಗ ಕಲಿಸಲು ನಮ್ಮಯೋಗ ಗುರುಗಳು ಸಿದ್ದರಿರುತ್ತಾರೆ. ಪತಂಜಲಿ ಯೋಗ ಶಿಕ್ಷ ಣ ಸಮಿತಿಯಂತೂ  ವಿವಿಧ ಬಡಾವಣೆಗಳಲ್ಲಿ ನೂರಾರು ಶಾಖೆಗಳನ್ನು ಆರಂಭಿಸಿ ಪ್ರತೀ ನಿತ್ಯ ಮೈಸೂರಿನಲ್ಲಿ ಯೋಗವನ್ನು ಉಚಿತವಾಗಿ ಹೇಳಿಕೊಡುತ್ತಿದೆ.

ಈ ಸಮಿತಿಯ ಸಾವಿರಾರು ಮಂದಿ ನಿಸ್ವಾರ್ಥವಾಗಿಯೇ ಯೋಗ ಕೆಲಸ ಮಾಡುತ್ತಿದ್ದಾರೆಂದರೆ ಇವರಿಗಿರುವ ಅನನ್ಯವಾದ ಯೋಗ ಪ್ರೀತಿಯೇ ಇದಕ್ಕೆ ಕಾರಣವಾಗಿದೆ.ಇಂತಹ ಪ್ರೀತಿಯಿಂದಲೇ ಭಾರತ ಯೋಗದಲ್ಲಿ ವಿಶ್ವಗುರು ವಾಗಿರುವುದು. ಇಲ್ಲಿ ಮೈಸೂರಿಗರ ಯೋಗ ಚಟುವಟಿಕೆಗಳದ್ದು ಬಹು ದೊಡ್ಡ ಪಾಲಿದೆ.

ಬಡಾವಣೆಗಳಲ್ಲಿ ಯೋಗ ಭಾಗ್ಯ: ಮೈಸೂರಿನ ಅನೇಕ ಬಡಾವಣೆಗಳು ಯೋಗ ಟೌನ್‌ಶಿಫ್ ಗಳಂತಾಗಿವೆ. ಇದರಲ್ಲಿ ಗೋಕುಲಂ ಬಡಾವಣೆಯ ಹೆಸರು ಮೊದಲ ಸ್ಥಾನದಲ್ಲಿದೆ. ಒಂದು ಕಾಲಕ್ಕೆ ನಿವೃತ್ತರ ಸ್ವರ್ಗದಂತಿದ್ದ ಗೋಕುಲಂ ಬಡಾವಣೆ ಯೋಗದ ಚಟುವಟಿಕೆಗಳಿಂದಲೇ ಹೆಸರು ಮಾಡಿದೆ. ಇಲ್ಲಿ ಯೋಗ ಕಲಿಕೆಯ ವಿಭಿನ್ನ ಸ್ವರೂಪಗಳು ತಲೆ ಎತ್ತಿವೆ. ಹದಿನೈದಕ್ಕೂ ಹೆಚ್ಚು ಯೋಗ ಶಾಲೆಗಳು ಸ್ಥಾಪನೆಗೊಂಡಿವೆ. ಹಾಗೂ ಅವುಗಳನ್ನು ಹುಡುಕಿಕೊಂಡು ಬರುವ ವಿದೇಶಿಗರು, ಇವರಿಗೆ ಸೇವೆ ನೀಡುವ ಸಲುವಾಗಿ ಗೃಹೋದ್ಯಮ, ಹೊಟೇಲ್, ರೆಸ್ಟೋರೆಂಚ್, ಬಟ್ಟೆ ಅಂಗಡಿಗಳು, ಊಟದ ಮೆಸ್ ಗಳು ಸೃಷ್ಟಿಗೊಂಡಿವೆ.

ಇದೇ ರೀತಿ ಲಕ್ಷ್ಮೀಪುರಂ ಬಡಾವಣೆ ಕೂಡ ಯೋಗದ ಮತ್ತೊಂದು ಪ್ರದೇಶವಾಗಿ ರೂಪುಗೊಂಡಿದೆ. ವಿಜಯನಗರ,ಸಿದ್ದಾರ್ಥನಗರ, ಚಾಮರಾಜಪುರಂ, ಸರಸ್ವತಿಪುರಂ, ಬೋಗಾದಿ, ಕುವೆಂಪು ನಗರದಲ್ಲೂ ಇದೇ ಮಾದರಿ ಜನಪ್ರಿಯವಾಗಿದ್ದು, ಆಯುರ್ವೇದ ಆರೋಗ್ಯಧಾಮಗಳೊಂದಿಗೆ ಯೋಗ ತರಗತಿ ನಡೆಸುವ ಹೊಸ ಟ್ರೆಂಡ್ ಕೂಡ ಇದರೊಂದಿಗೆ ಸೇರಿಕೊಂಡಿದೆ. ಅಲ್ಲದೆ, ಪತಂಜಲಿ ಯೋಗ ಸಮಿತಿ, ಬಾಬಾ ರಾಮದೇವ್ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ , ಸಿದ್ಧ ಸಮಾಧಿ ಯೋಗ, ಆರ್ಟ್ ಆಫ್ ಲಿವಿಂಗ್, ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಜಿ.ಎಸ್.ಎಸ್ ಯೋಗ ಸಂಸ್ಥೆ, ಮೈಸೂರು ಯೋಗ ಒಕ್ಕೂಟ, ಯೋಗ ಭಾರತ್, ಉಪನಿಷತ್ ಯೋಗ, ಇಶಾ ಫೌಂಡೇಶನ್, ಮೈಸೂರು ಜಿಲ್ಲಾ ಯೋಗ ಫೌಂಡೇಷನ್ ಸೇರಿದಂತೆ ಹಲವಾರು ಸಂಸ್ಥೆಗಳು ಯೋಗ -ಧ್ಯಾನ ಕಲಿಸುವ ಕೆಲಸ ಮಾಡುತ್ತಿವೆ.

ಇವತ್ತಿಗೂ ಮೈಸೂರಿನಲ್ಲಿ ಪ್ರತಿದಿನ 20ರಿಂದ 25ಸಾವಿರ ಮಂದಿ ಯೋಗ ಕಲಿಯುತ್ತಿರುವುದು ಯೋಗ ನಗರಿ ಮೈಸೂರಿನ ಹಿರಿಮೆಯಾಗಿದೆ.

ಯೋಗದ ಸಿರಿ ಬೆಳಕಿನಲ್ಲಿ: ಯೋಗವೆಂಬುದು ಭಾರತೀಯ ಜೀವನ ಪದ್ಧತಿ, ಆರೋಗ್ಯದ ಭಾಗ ಮತ್ತು ಭಾಗ್ಯ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ನಡುವೆಯೇ ಯೋಗ ಬ್ರ್ಯಾಂಡ್ ಮೂಲಕ ಆರ್ಥಿಕ ಲಾಭವನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ಒಂದು ಕಾಲದಲ್ಲಿ ಸಣ್ಣ ಹಂತದಲ್ಲಿ ನಡೆದಿತ್ತು. ಆದರೆ ಇಂದು ಇದು ದೊಡ್ಡದಾಗಿದ್ದು ಇಂಥ ಪ್ರಯತ್ನಕ್ಕೆ ಕೊಡುಗೆ ನೀಡಿದ ನಗರಿ ಮೈಸೂರು. ಏಕೆಂದರೆ ಜಗತ್ತಿನ ಹತ್ತಾರು ದೇಶಗಳಿಗೆ ಯೋಗವನ್ನು ಪರಿಚಯಿಸಿದ್ದರ ಹಿಂದೆ ಮೈಸೂರಿನದ್ದೇ ಸಿಂಹಪಾಲು. ಯೋಗ ಕಲಿಕೆಗೆ ಮತ್ತು ಯೋಗಾಭ್ಯಾಸಕ್ಕೆ ಮೈಸೂರು ಸೂಕ್ತ ಸ್ಥಳ. ”ನೀವು ಭೇಟಿ ನೀಡಲೇ ಬೇಕಾದ ಜಗತ್ತಿನ ಅತ್ಯುತ್ತಮ 31ತಾಣಗಳ ಪೈಕಿ ಮೈಸೂರು ಕೂಡ ಒಂದು.

ಶಾಸ್ತ್ರೀಯವಾಗಿ ಯೋಗ ಕಲಿಯಬೇಕೆಂದರೆ, ಮೈಸೂರಿಗೆ ಖಂಡಿತ ಭೇಟಿ ನೀಡಲೇ ಬೇಕು…” ಎಂದು ನ್ಯೂಯಾರ್ಕ್ ಟೈಮ್ಸ್ ಬಹಳ  ಹಿಂದೆಯೇ ಸಮೀಕ್ಷೆಯೊಂದನ್ನು ಆಧರಿಸಿ ಈ ರೀತಿ ಹೇಳಿರುವುದೇ ಇದಕ್ಕೆ ಪುರಾವೆಯಾಗಿದೆ. ಯೋಗದ ಸಿರಿ ಬೆಳಕಿನ ಮೈಸೂರಿನಲ್ಲಿ ಯೋಗವನ್ನು ಕಲಿಯುವುದೇ ಒಂದು ಯೋಗಾಯೋಗ.

ಈಗಲೂ ಯೋಗ ಕಲಿಯಲೆಂದು ಹೊರ ದೇಶಗಳಿಂದ ಭಾರತಕ್ಕೆ ಬರುವ ವಿದೇಶಿಗರ ಪೈಕಿ ಬಹುತೇಕರಿಗೆ ಮೈಸೂರೇ ಪ್ರಥಮ ಆದ್ಯತೆ. ವಿದೇಶಿಯರಿಗೆ ಯೋಗ ಕಲಿಸಿ ಕೊಟ್ಟು ಲಕ್ಷ ಗಟ್ಟಲೆ ಹಣ ಗಳಿಸುವ ಕೆಲವು ಯೋಗ ಶಾಲೆಗಳ ಜತೆಯಲ್ಲೇ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಯೋಗವನ್ನು ಸರಳ ಶೈಲಿಯಲ್ಲಿ ಸೇವಾಮನೋಭಾವದಿಂದ ಉಚತವಾಗಿ ಹೇಳಿಕೊಡುವ ಹತ್ತಾರು ಸಂಸ್ಥೆಗಳಿಗೂ ಮೈಸೂರು ಆಶ್ರಯ ನೀಡಿದೆ. ಇದರಲ್ಲಿ ಮೈಸೂರು ನಗರದ ಪ್ರತಿ ಬಡಾವಣೆಗಳಲ್ಲೂ ನೂರಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳಲ್ಲಿ ಯೋಗ ಶಾಲಾ ಶಾಖೆಗಳನ್ನು ಹೊಂದಿ ಎಲ್ಲರಿಗೂ ಸನಾತನ ಮಾರ್ಗದಲ್ಲಿ  ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಾಧನೆ ಬಹುದೊಡ್ಡದಿದ್ದು ದಾಖಲಾರ್ಹವಾಗಿದೆ.

ಇದು ಪ್ರಾರಂಭವಾಗಿ ಐದು ದಶಕಗಳು ಸಮೀಪಿಸಿದೆ. ಈಗ ಮೈಸೂರು ಒಳಗೊಂಡಂತೆ ಪ್ರಪಂಚದಾದ್ಯಂತ ಇದರ ಹತ್ತು ಸಾವಿರಕ್ಕೂ ಅಧಿಕ ಶಾಖೆಗಳಿವೆ. ಇಲ್ಲಿಯತನಕ  ಇಲ್ಲಿ ಕಲಿತವರ ಸಂಖ್ಯೆ ಕೋಟಿ ಮೀರಿದೆ. ಕೋಟಿಗಿಂತಲೂ ಇದರ ಸೇವೆ ಮುಖ್ಯವೆನಿಸುವುದು ಇಲ್ಲಿಯವರೆಗೂ ಯೋಗಾಭ್ಯಾಸಿಗಳಾದ ದೇಶೀಯರಿಂದ ಇರಲಿ ವಿದೇಶಿಯರಿಂದಲೂ ಒಂದು ನಯಾಪೈಸೆಯನ್ನೂ ಶುಲ್ಕವಾಗಿ ಪಡೆದಿಲ್ಲ.ಯೋಗದಷ್ಟೇ ಈ ಸಂಸ್ಥೆಯ ಯೋಗ ಸೇವೆ ಶ್ರೇಷ್ಠತಮವಾಗಿದ್ದು ಯೋಗ ನಗರಿ ಮೈಸೂರಿಗರ ಹೆಮ್ಮೆಯಾಗಿದೆ.

ಬನ್ನೂರು ಕೆ ರಾಜು ಅವರು ಬರೆದ ಲೇಖನ, ಸುದ್ದಿ ವಿಚಾರಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ..

admin
the authoradmin

Leave a Reply

Translate to any language you want