ArticlesLatestNews

ತೂಗು ಸೇತುವೆಗಳ ಸರದಾರ  ಇನ್ನಿಲ್ಲ…  ಅಗಲಿದ  ಸುಳ್ಯದ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್  

ಸುಳ್ಯ: ಮಲೆನಾಡು ಸೇರಿದಂತೆ ದೇಶದ ಹಲವು ಕಡೆ ತೂಗು ಸೇತುವೆಗಳನ್ನು ನಿರ್ಮಿಸಿ ಕ್ರಾಂತಿ ಮಾಡಿದ್ದತೂಗು ಸೇತುವೆಗಳ ಸರದಾರ ಎಂದೇ ಜನವಲಯದಲ್ಲಿ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ  ಡಾ. ಗಿರೀಶ್ ಭಾರದ್ವಾಜ್  ಮಂಗಳವಾರ ಬೆಳಿಗ್ಗೆ ನಮ್ಮನ್ನಗಲಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಅವರು ಇತ್ತೀಚೆಗೆ ಹೃದಯದ ಕಾಯಿಲೆಗಳಿಂದ  ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಅವರ ತವರು ಅರಂಬೂರು ಮತ್ತು ಕೊಡಗಿನ ಕಾವೇರಿ ನಿಸರ್ಗಧಾಮದಲ್ಲಿ ಮೊದಲ ಬಾರಿಗೆ ತೂಗುಸೇತುವೆ ನಿರ್ಮಿಸಿ ಗಮನಸೆಳೆದಿದ್ದರು. ಆ ನಂತರ ಅವರು ಮಲೆನಾಡಿನ ಬಹಳಷ್ಟು ನದಿಗಳಿಗೆ ತೂಗುಸೇತುವೆ ನಿರ್ಮಿಸಿ ಗ್ರಾಮೀಣ ಜನರಿಗೆ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಇಂಜಿನಿಯರ್ ಆಗಿದ್ದ ಡಾ. ಗಿರೀಶ್ ಭಾರದ್ವಾಜ್ ಅವರು 1950ರ ಮೇ 2 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಜನಿಸಿದ್ದರು.

ಮಂಡ್ಯದ ಪಿ.ಇ.ಎಸ್. ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ (PESCE) ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು 1973 ರಲ್ಲಿ ಪಡೆದರು. ನಂತರ ಊರಲ್ಲಿದ್ದುಕೊಂಡೇ ವರ್ಕ್‌ಶಾಪ್ ಸ್ಥಾಪಿಸಿ ಬಳಿಕ ತೂಗುಸೇತುವೆಗಳ ನಿರ್ಮಾಣದತ್ತ ಗಮನಹರಿಸಿದರು. ಮಲೆನಾಡಿನಲ್ಲಿ ಮಳೆಗಾಲ ಆರಂಭವಾದಾಗ ಹೊಳೆಗಳು ತುಂಬಿ ಹರಿದಾಗ ಬೇಸಿಗೆಯಲ್ಲಿ ಹೊಳೆಯನ್ನು ದಾಟಲು ನಿರ್ಮಿಸಿಕೊಂಡಿದ್ದ ಕಾಲುಸೇತುವೆಗಳು ಮುಳುಗಿ ಹೋಗುತ್ತಿದ್ದವು. ಆಗ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತಿದ್ದವು. ಇಂತಹ ಊರುಗಳಲ್ಲಿ ತೂಗುಸೇತುವೆ ನಿರ್ಮಿಸಿ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಆ ಮೂಲಕ ದೇಶಾದ್ಯಂತ ತೂಗುಸೇತುವೆ ನಿರ್ಮಾಣಕ್ಕೆ ನಾಂದಿ ಹಾಡಿದರು.

1989ರಲ್ಲಿ ಅರಂಬೂರು ಗ್ರಾಮದಲ್ಲಿ ಪಯಸ್ವಿನಿ ನದಿಗೆ ತೂಗುಸೇತುವೆ ನಿರ್ಮಿಸಿ ಗಮನಸೆಳೆದರು. ಆ ನಂತರ  ನೂರಾರು ತೂಗುಸೇತುವೆಗಳನ್ನು ಅವಿಷ್ಕಾರ ಮಾಡಿದ್ದು ಅವರ ಸಾಧನೆಯಾಗಿದೆ. ಇವತ್ತು ತೂಗುಸೇತುವೆ ಮೂಲಕ ಹಲವು ಗ್ರಾಮಗಳ ಜನರಿಗೆ ಸಂಪರ್ಕ ಸೇತುವಾಗಿದ್ದರು. ರಾಜ್ಯ ಮಾತ್ರವಲ್ಲದೆ, ಒಡಿಸ್ಸಾ ಮತ್ತು ಆಂಧ್ರಪ್ರದೇಶದಲ್ಲಿಯೂ ತೂಗುಸೇತುವೆ ನಿರ್ಮಿಸಿ ಜನರ ಗಮನಸೆಳೆದಿದ್ದಾರೆ.

ಇವರ ಸಾಧನೆಯನ್ನು ಗುರುತಿಸಿ 2017ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಸುವರ್ಣ ನ್ಯೂಸ್ -ಕನ್ನಡಪ್ರಭ ದಿಂದ ಅಸಮಾನ್ಯ ಕನ್ನಡಿಗ ಗೌರವಕ್ಕೆ ಭಾಜನರಾಗಿದ್ದರು.  ಇಷ್ಟೇ ಅಲ್ಲದೆ ಹಲವು ಸಂಘ ಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿ, ಗೌರವಗಳನ್ನು ನೀಡಿ ಸನ್ಮಾನಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

admin
the authoradmin

Leave a Reply