ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ
ಕಚೇರಿ ಅಲೆದಾಟ ನಿಲ್ಲಿಸಿ ಜನರ ಬದುಕು ಉಳಿಸಿ

ಕೊಡಗು ನಮ್ಮ ಹೆಮ್ಮೆ. ಕಾಫಿಯ ಸುವಾಸನೆ, ಕಿತ್ತಳೆಯ ಸಿಹಿ, ಕಾವೇರಿಯ ಪಾವಿತ್ರ್ಯತೆ – ಇವೆಲ್ಲ ನಮ್ಮ ಬದುಕಿನ ಭಾಗ. ಪಿತ್ರಾರ್ಜಿತವಾಗಿ ಬೆವರು ಸುರಿಸಿ ಕಟ್ಟಿದ ಈ ನಾಡಿನಲ್ಲಿ ಇವತ್ತು ಒಂದು ಆರ್‌ಟಿಸಿ ತಿದ್ದುಪಡಿ, ಜಮ್ಮ ಬಾಣೆ ಹಕ್ಕುಪತ್ರಕ್ಕಾಗಿ ನಮ್ಮ ಜನ ತಿಂಗಳುಗಟ್ಟಲೆ ಕಾಯುವಂತಾಗಿದೆ. ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಪ್ರಸ್ತಾಪಿಸಿದ್ದು, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಪರಿಹರಿಸಬೇಕಾದ ಸಾಮೂಹಿಕ ಜವಾಬ್ದಾರಿ ಎಂಬುದನ್ನು ನೆನಪಿಸಿದ್ದಾರೆ.
ಇದನ್ನೂಓದಿ … ಕೊಡಗಿನ ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಿದ ಮೇಲೆ ‘ಅಯ್ಯೋ ನನ್ನ ಸೊಂಟ’ ಎನ್ನದೆ ಬೇರೆ ದಾರಿಯಿಲ್ಲ!
ದ್ವೇಷ ರಾಜಕಾರಣವನ್ನು ಬಿಟ್ಟು ಕೆಲಸದ ಕಡೆ ಗಮನ ಹರಿಸಿದರೆ ಒಳ್ಳೆಯದು. ಪ್ರಶ್ನೆ ಮಾಡುವವರನ್ನು ಅಳೆಯುವ ಕೆಲಸವನ್ನು ಬಿಟ್ಟು, ಆಗಬೇಕಾಗಿರುವ ಜನಸೇವೆಯ ಕೆಲಸದ ಕಡೆ ಗಮನ ಹರಿಸಿದರೆ ಕೊಡಗಿನ ಚಿತ್ರಣವೇ ಬದಲಾಗುತ್ತದೆ. ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತದೆ. ಅಭಿವೃದ್ಧಿ ಆಗಿಲ್ಲ, ಕೆಲಸ ಆಗಿಲ್ಲ ಅಂದರೆ ಪ್ರಶ್ನೆ ಕೇಳುವುದು ಪ್ರತಿಯೊಬ್ಬ ಜನಸಾಮಾನ್ಯನ ಜನ್ಮಸಿದ್ಧ ಹಕ್ಕು. ಚರ್ಚೆ ಬೇಕು, ಆದರೆ ದೂಷಣೆ ಬೇಡ. ಭಿನ್ನಾಭಿಪ್ರಾಯ ಇರಲಿ, ಆದರೆ ಅಭಿವೃದ್ಧಿಗೆ ಅಡ್ಡಿಯಾಗದಿರಲಿ. ಕೊಡಗಿನ ಜನರ ನೆಮ್ಮದಿಯೇ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು.

ನಾಪೋಕ್ಲು, ಸಂಪಾಜೆ, ಕುಟ್ಟ, ಶ್ರೀಮಂಗಲ, ಭಾಗಮಂಡಲ, ಬಿರುನಾಣಿ, ತೆರಾಲು, ಮುಟ್ಲು, ಚಂಬು – ಈ ಎಲ್ಲಾ ಊರುಗಳ ಜನ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ, ಪೊನ್ನಂಪೇಟೆ ತಾಲೂಕು ಕಚೇರಿಗಳಿಗೆ ತಮ್ಮ ದಾಖಲೆಯ ಕೆಲಸಕ್ಕಾಗಿ ಬರುತ್ತಾರೆ. ಪಿತ್ರಾರ್ಜಿತ ಜಮ್ಮ ಭೂಮಿಗೆ ಮೊಮ್ಮಗನ ಹೆಸರು ಸೇರಬೇಕು, ಮೃತ ಪೋಷಕರ ಪಟ್ಟಾ ಮಕ್ಕಳ ಹೆಸರಿಗೆ ಬರಬೇಕು, ಪೋಡಿ-1 ತಿದ್ದುಪಡಿ ಆಗಬೇಕು – ಇವು ಕೊಡಗಿನ ಪ್ರತಿ ಮನೆಯ ನಿರೀಕ್ಷೆ.
ದಾಖಲೆ ಸಿಕ್ಕರೆ ಏನೆಲ್ಲಾ ಬದಲಾವಣೆ ಆಗುತ್ತದೆ ಗೊತ್ತೇ?
ಎಷ್ಟೋ ಯುವಜನರ ಮನೆ ಕಟ್ಟುವ ಕನಸು ನನಸಾಗಬಹುದು. ಸರಿಯಾದ ಆರ್‌ಟಿಸಿ, ಸಿಂಗಲ್ ಪಹಣಿ ಕೈಯಲ್ಲಿದ್ದರೆ ಬ್ಯಾಂಕ್‌ನಿಂದ ಗೃಹ ಸಾಲ ಸುಲಭವಾಗಿ ಸಿಗುತ್ತದೆ. ತಲೆಮಾರಿನಿಂದ ಕನಸು ಕಂಡಿದ್ದ ಸ್ವಂತ ಸೂರು ತಲೆಯ ಮೇಲೆ ನಿಲ್ಲುತ್ತದೆ.
ಇದನ್ನೂ ಓದಿ… ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…
ಇನ್ನೂ ಒಂದು ಫೋರ್ ವೀಲರ್ ವಾಹನ ತೆಗೆದುಕೊಳ್ಳಲಾಗದೆ ಪರದಾಡುತ್ತಿರುವ ಮಧ್ಯಮ ವರ್ಗದವರ ಬದುಕು ಸುಗಮವಾಗಬಹುದು. ಕೃಷಿಯ ಜೊತೆಗೆ ಸಣ್ಣ ವ್ಯಾಪಾರ, ಟ್ಯಾಕ್ಸಿ ವ್ಯವಹಾರ ಮಾಡಬೇಕು ಎನ್ನುವವರಿಗೆ ದಾಖಲೆ ಇದ್ದರೆ ವಾಹನ ಸಾಲ ಸಿಗುತ್ತದೆ. ಕುಟುಂಬದ ಆದಾಯ ಹೆಚ್ಚುತ್ತದೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ.
‘ಮನೆಯೂ ಇಲ್ಲ, ಜಾಗವೂ ಇಲ್ಲ, ನೆಮ್ಮದಿಯೇ ಇಲ್ಲ’ ಅನ್ನುವವರ ಬದುಕು ಬಂಗಾರವಾಗಿ ಸುಗಮವಾಗಬಹುದು. ಪಿತ್ರಾರ್ಜಿತ ಜಮ್ಮ ಭೂಮಿಗೆ ಹಕ್ಕುಪತ್ರ ಸಿಕ್ಕರೆ ಅದು ಕೇವಲ ಕಾಗದವಲ್ಲ, ಒಂದು ಕುಟುಂಬದ ಅಸ್ತಿತ್ವಕ್ಕೆ ಸಿಗುವ ಮಾನ್ಯತೆ. ಸರ್ಕಾರಿ ಸೌಲಭ್ಯ, ಪಿಎಂ ಆವಾಸ್ ಯೋಜನೆ, ಕೃಷಿ ಸಹಾಯಧನ ಎಲ್ಲವೂ ಅವರ ಮನೆ ಬಾಗಿಲಿಗೆ ಬರುತ್ತದೆ.

ಒಬ್ಬ ರೈತ ತನ್ನ ಪಹಣಿ ಕೆಲಸಕ್ಕೆ ತಾಲೂಕು ಕಚೇರಿಗೆ 10-15 ಬಾರಿ ಬರಬೇಕಾಗುತ್ತದೆ. ಪ್ರತಿ ಬಾರಿ ₹500 ಪ್ರಯಾಣ, ಒಂದು ದಿನದ ಕೂಲಿ ನಷ್ಟ. ಮಾನ್ಯ ಪ್ರಧಾನಮಂತ್ರಿಯವರು ‘ಇಂಧನ ಉಳಿಸಿ, ದೇಶ ಉಳಿಸಿ’ ಎಂದು ಕರೆ ನೀಡಿದ್ದಾರೆ. ಒಂದು ಸಹಿಗಾಗಿ ನೂರಾರು ಕಿ.ಮೀ ಬೈಕ್ ಅಥವಾ ಕಾರಿನಲ್ಲಿ ಓಡಾಡಿ ಇಂಧನ ವ್ಯಯವಾದರೆ ಅದು ನಮಗೆಲ್ಲರಿಗೂ ನಷ್ಟ. ತಂತ್ರಜ್ಞಾನ ಬಳಸಿ, ಒಂದೇ ಭೇಟಿಯಲ್ಲಿ ಕೆಲಸ ಮುಗಿಯುವ ವ್ಯವಸ್ಥೆ ನಮ್ಮ ಗುರಿಯಾಗಬೇಕು.
ಇದನ್ನೂ ಓದಿ… ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?
ಮಳೆಗಾಲದಲ್ಲಿ ಕೊಡಗಿನ ಭೌಗೋಳಿಕ ಸ್ಥಿತಿ ಎಲ್ಲರಿಗೂ ಗೊತ್ತು. ಗುಡ್ಡಕುಸಿತ, ರಸ್ತೆ ಸಮಸ್ಯೆಯ ನಡುವೆ ಜನ ಕಚೇರಿಗೆ ಬರುತ್ತಾರೆ. ಅವರ ಶ್ರದ್ಧೆಗೆ ನಾವೆಲ್ಲರೂ ಸ್ಪಂದಿಸಬೇಕು. ತಂದೆ/ತಾಯಿ ತೀರಿಕೊಂಡು 2-3 ವರ್ಷವಾದರೂ ಪಹಣಿ ಬದಲಾವಣೆ ಆಗದೆ ಇದ್ದರೆ ಆ ಕುಟುಂಬದ ನೋವು ನಮಗೆಲ್ಲರಿಗೂ ಅರ್ಥವಾಗುತ್ತದೆ. ಇದಕ್ಕೆ ಪರಿಹಾರ ಏನು? ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಎಲ್ಲರೂ ಸೇರಿ ಮಾಡಿ.

‘ಕೊಡಗು ದಾಖಲೆ ಸುಗಮ ಅಭಿಯಾನ’ ಆರಂಭಿಸಿ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ, ಜನಪ್ರತಿನಿಧಿಗಳ ಸಹಕಾರದಲ್ಲಿ ಎಲ್ಲಾ ತಾಲೂಕುಗಳಲ್ಲಿ 3 ತಿಂಗಳ ವಿಶೇಷ ಅಭಿಯಾನ ನಡೆಸಿ ಬಾಕಿ ಇರುವ ಜಮ್ಮ ಬಾಣೆ, ಆರ್‌ಟಿಸಿ, ಪೋಡಿ-1 ತಿದ್ದುಪಡಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ. ಇದು ನಮ್ಮ ಕೊಡಗಿನ ಲಕ್ಷಾಂತರ ಕುಟುಂಬಗಳಿಗೆ ಹೊಸ ಬದುಕು ಕೊಡುತ್ತದೆ. ಕೆಲಸ ಮಾಡದ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಮೊದಲು ಮನೆಗೆ ಕಳುಹಿಸಿ.
ಇದನ್ನೂ ಓದಿ… ಆನೆ ನಾಡಿಗೆ ನುಗ್ಗುತ್ತಿರುವುದೇಕೆ? ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!
‘ಮನೆ ಬಾಗಿಲಿಗೆ ಕಂದಾಯ ಸೇವೆ’ ವಿಸ್ತರಿಸಿ. ಆಡಳಿತ ವರ್ಗದ ಮಾರ್ಗದರ್ಶನದಲ್ಲಿ, ಅಧಿಕಾರಿಗಳ ಶ್ರಮದಿಂದ ಬಿರುನಾಣಿ, ತೆರಾಲು, ಮುಟ್ಲು, ಚಂಬು, ನಾಪೋಕ್ಲು, ಸಂಪಾಜೆ, ಭಾಗಮಂಡಲ ಹಾಗೂ ದೂರದ ಹಳ್ಳಿಗಳಿಗೆ ‘ಮೊಬೈಲ್ ನಾಡಕಚೇರಿ’ ಮೂಲಕ ಕಂದಾಯ, ಸರ್ವೇ ಇಲಾಖೆಯ ಸೇವೆಯನ್ನು ತಿಂಗಳಿಗೊಮ್ಮೆ ತಲುಪಿಸಿ. ಇದರಿಂದ ವೃದ್ಧರಿಗೆ, ಮಹಿಳೆಯರಿಗೆ, ಕೂಲಿಕಾರರಿಗೆ ಬಹಳ ಅನುಕೂಲವಾಗುತ್ತದೆ.

‘ಡಿಜಿಟಲ್ ಕೊಡಗು – ಪಾರದರ್ಶಕ ಸೇವೆ’ ಜಾರಿಗೆ ತನ್ನಿ. ಜನಪ್ರತಿನಿಧಿಗಳ ದೂರದೃಷ್ಟಿಯಲ್ಲಿ, ಅಧಿಕಾರಿಗಳ ದಕ್ಷತೆಯಿಂದ ಐದೂ ತಾಲೂಕು ಕಚೇರಿಯಲ್ಲಿ ಅರ್ಜಿಯ ಸ್ಥಿತಿಯನ್ನು ಮೊಬೈಲ್ ಮೂಲಕವೇ ನೋಡುವ ‘ಫೈಲ್ ಟ್ರ್ಯಾಕಿಂಗ್’ ವ್ಯವಸ್ಥೆ, ಕೌಂಟರ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಸೇವೆಯ ಗುಣಮಟ್ಟ ಹೆಚ್ಚಿಸಿ. 30 ದಿನದೊಳಗೆ ಸೇವೆ ನೀಡುವ ಸಂಕಲ್ಪ ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ನಿಮ್ಮೆಲ್ಲರದ್ದಾಗಲಿ.
ಇದನ್ನೂಓದಿ …ಆಸ್ಪತ್ರೆಗಾಗಿ ಕಾಯುತ್ತಿರುವ ಶೂರರ ನಾಡು ಕೊಡಗು: ಇದು ನೋವು ಅಲ್ಲದೆ ಮತ್ತೇನು?
ನೆನಪಿಡಿ, ಅಧಿಕಾರಿಗಳು ನಮ್ಮ ಸಮಾಜದ ಶಕ್ತಿ. ಜನಪ್ರತಿನಿಧಿಗಳು ನಮ್ಮ ದಾರಿದೀಪ. ಆಡಳಿತ ವರ್ಗ ನಮ್ಮ ಬೆನ್ನೆಲುಬು. ನೀವೆಲ್ಲರೂ ಒಂದೇ ಕುಟುಂಬ. ನಿಮ್ಮ ಶ್ರಮಕ್ಕೆ ನಾಗರಿಕರ ಸಹಕಾರ ಸದಾ ಇರುತ್ತದೆ. ನಿಮ್ಮೆಲ್ಲರ ಒಗ್ಗಟ್ಟಿನಿಂದ ಕೊಡಗಿನ ಯಾವ ಸಮಸ್ಯೆಯೂ ದೊಡ್ಡದಲ್ಲ.

ಪೊನ್ನಂಪೇಟೆಯಿಂದ ಚಂಬುವರೆಗೆ, ಭಾಗಮಂಡಲದಿಂದ ತೆರಾಲುವರೆಗೆ ಕೊಡಗಿನ ಪ್ರತಿ ಪ್ರಜೆಗೂ ಸಮಯಕ್ಕೆ ಸರಿಯಾಗಿ ದಾಖಲೆ ಸಿಗಬೇಕು. ಪಿತ್ರಾರ್ಜಿತ ಭೂಮಿಗೆ ಮೊಮ್ಮಗನ ಹಕ್ಕುಪತ್ರ ಸಿಕ್ಕಾಗ, ಯುವಕನಿಗೆ ಮನೆ ಕಟ್ಟಲು ಸಾಲ ಸಿಕ್ಕಾಗ, ಮಧ್ಯಮ ವರ್ಗದವನಿಗೆ ನೆಮ್ಮದಿಯ ಬದುಕು ಸಿಕ್ಕಾಗ ಮಾತ್ರ ನಿಮ್ಮೆಲ್ಲರ ಜವಾಬ್ದಾರಿ ಸಾರ್ಥಕವಾದಂತೆ. ಇದರಿಂದ ಕೊಡಗಿನ ಆರ್ಥಿಕತೆ ಬಲಗೊಳ್ಳುತ್ತದೆ, ಗುಳೆ ಹೋಗುವುದು ನಿಲ್ಲುತ್ತದೆ, ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ.
ಇದನ್ನೂಓದಿ … ಕೊಡಗಿನ ವೀರ ಪರಂಪರೆಗೆ ಸಾವಿಲ್ಲ. ಅದು ಹಿಮಾಲಯದಷ್ಟು ಎತ್ತರ, ಕಾವೇರಿಯಷ್ಟು ಪವಿತ್ರ,
ವಿನಂತಿ….. ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಎಲ್ಲರೂ ಒಂದಾಗಿ ಈ ಕೆಲಸ ಮಾಡಿ. ಒಬ್ಬರಿಗೊಬ್ಬರು ಹೆಗಲು ಕೊಟ್ಟು, ಕೊಡಗಿನ ಜನರ ಕಣ್ಣೀರು ಒರೆಸಿ. ಪ್ರಜಾಪ್ರಭುತ್ವದಲ್ಲಿ ಪ್ರಶ್ನಿಸುವ ಹಕ್ಕನ್ನು ಗೌರವಿಸಿ, ದ್ವೇಷ, ರಾಜಕೀಯ, ದೂಷಣೆ ಬಿಟ್ಟು, ಅಭಿವೃದ್ಧಿಯೊಂದೇ ಮಂತ್ರವಾಗಲಿ. ಆಗಬೇಕಾಗಿರುವ ಕೆಲಸದ ಕಡೆ ನಿಮ್ಮೆಲ್ಲರ ಗಮನ ಇರಲಿ. ದಾಖಲೆ ನಮ್ಮ ಹಕ್ಕು, ತ್ವರಿತ ಸೇವೆ ನಿಮ್ಮೆಲ್ಲರ ಕರ್ತವ್ಯ. ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಎಲ್ಲರೂ ಸೇರಿ ಸಮೃದ್ಧ ಕೊಡಗು ಕಟ್ಟಿ.








