CrimeLatest

ಹನಗೋಡು ಬಳಿ ಉಳುಮೆ ಮಾಡುತ್ತಿದ್ದ ಎತ್ತುಗಳ ಮೇಲೆ ಹುಲಿ ದಾಳಿ.. ಎತ್ತು ಬಲಿ, ರೈತ ಪಾರು

ಹುಣಸೂರು: ಉಳುಮೆ ಮಾಡುತ್ತಿದ್ದ ವೇಳೆ  ಹುಲಿ  ಏಕಾಏಕಿ ದಾಳಿ ಮಾಡಿದ ಪರಿಣಾಮ ಎತ್ತು ಸಾವನ್ನಪ್ಪಿದ್ದು, ರೈತ ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹನಗೋಡು ಹೋಬಳಿಯ ಹೊಸಕೋಟೆ ಗ್ರಾಮದ ಸಮೀಪ ಸೋಮವಾರ ಸಂಜೆ ನಡೆದಿದೆ.

ಚೆನ್ನಸೋಗೆ ಗ್ರಾಮದ ನಿವಾಸಿ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮ್ ಅವರು ಹೊಸಕೋಟೆ ಗ್ರಾಮದ ಸಮೀಪದ ತಮ್ಮ ಜಮೀನಿನಲ್ಲಿ  ಉಳುಮೆ ಕಾರ್ಯದಲ್ಲಿ ತೊಡಗಿದ್ದಾಗ ಏಕಾಏಕಿ ಬಂದ ಹುಲಿ ಉಳುಮೆ ಮಾಡುತ್ತಿದ್ದ ಎತ್ತಿನ ಮೇಲೆ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಎತ್ತು ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ನಡೆದ ಸಂದರ್ಭದಲ್ಲಿ ಶಿವರಾಮ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹುಲಿಯ ದಾಳಿಯಿಂದ ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದ್ದು, ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಆರ್‌ಎಫ್‌ಒ ಸಂತೋಷ್ ಹೂಗಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಚಂದ್ರೇಶ್, ದಿವಾಕರ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಎತ್ತಿನ ಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸುವುದರ ಜೊತೆಗೆ, ಹುಲಿಯ ಚಲನವಲನದ ಮೇಲೆ ನಿಗಾವಹಿಸಿ ಸೆರೆಹಿಡಿಯುವುದಾಗಿ ಭರವಸೆ ನೀಡಿದ್ದಾರೆ.

 ತಂಬಾಕು ಬ್ಯಾರನ್ ಗೆ ಬೆಂಕಿ ಲಕ್ಷಾಂತರ ರೂ ಮೌಲ್ಯದ ತಂಬಾಕು ಹಾನಿ

ಮತ್ತೊಂದು ಪ್ರಕರಣದಲ್ಲಿ ತಂಬಾಕು ಹದ ಮಾಡುವ ವೇಳೆ ಬ್ಯಾರನ್‌ಗೆ ಆಕಸ್ಮಿಕ ಬೆಂಕಿ ತಗುಲಿ ಬ್ಯಾರನ್ ಗೇರಿಸಿದ್ದ ಹೊಗೆಸೊಪ್ಪು ಸಂಪೂರ್ಣ ಸುಟ್ಟು ಭಸ್ಮವಾಗಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರುವ ಘಟನೆ ಹನಗೋಡು ಸಮೀಪದ ದೊಡ್ಡ ಹೆಜ್ಜೊರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಹನಗೋಡು ಹೋಬಳಿಯ ದೊಡ್ಡ ಹೆಜ್ಜೇರು ಗ್ರಾಮದ ಸಣ್ಣೇಗೌಡರಿಗೆ   ಸೇರಿದ 16×16 ಅಳತೆಯ ಡಬ್ಬಲ್ ಬ್ಯಾರನ್‌ನಲ್ಲಿ ತಂಬಾಕು ಎಲೆಗಳು ಹದಗೊಳ್ಳುತ್ತಿದ್ದ ಸಮಯದಲ್ಲಿ ಅಕಸ್ಮಿಕವಾಗಿ ಬೆಂಕಿ ಬಿದ್ದಿದ್ದು,  ಬ್ಯಾರೆನ್ ತುಂಬಾ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ಬಂದು ಬೆಂಕಿ ನಂದಿಸಿಸುವಷ್ಟರಲ್ಲಿ ತಂಬಾಕು ಹಾಗೂ ಬ್ಯಾರೆನ್ ಸಂಪೂರ್ಣ ಹಾನಿಯಾಗಿದೆ. ನಷ್ಟಕ್ಕೊಳಗಾದ ತಂಬಾಕು ಬ್ಯಾರನ್ ಮಾಲೀಕರಿಗೆ ಮಂಡಳಿ ವತಿಯಿಂದ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ತಂಬಾಕು ಮಂಡಳಿಯನ್ನು ಒತ್ತಾಯಿಸಿದ್ದಾರೆ.

ಚಾಕುವಿನಿಂದ ಇರಿದ ನಾಲ್ವರ ಬಂಧನ

ಮೈಸೂರು  ತಾಲೂಕಿನ ಗುಂಗ್ರಾಲ್‌ ಛತ್ರದಲ್ಲಿ ವಾಹನಕ್ಕೆ ತಗುಲಿದ ವಿಚಾರ ತಾರಕಕ್ಕೇರಿ  ಏಕಾಏಕಿ ಚಾಕುವಿನಿಂದ ಇರಿದ  ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಮೈಸೂರಿನ ಗುರುರಾಜ್‌, ಗುರು ಪ್ರಸಾದ್‌, ಜಿತೇಂದ್ರ ಮತ್ತು ರಾಹುಲ್‌ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಸಾಗರಕಟ್ಟೆ ಕಡೆಯಿಂದ ಆಟೋರಿಕ್ಷಾದಲ್ಲಿ ಮಹಿಳೆ ಸೇರಿದಂತೆ ಮೂವರು ಭಾನುವಾರ ಸಂಜೆ ಮೈಸೂರಿನತ್ತ ಬರುವಾಗ ಗುಂಗ್ರಾಲ್‌ ಛತ್ರದ ಬಳಿ ವಾಹನವೊಂದಕ್ಕೆ ಟಚ್‌ ಆಗಿದೆ. ಇದರಿಂದ ಎರಡು ವಾಹನದಲ್ಲಿದ್ದವರ ನಡುವೆ ಜಗಳ ಶುರುವಾಗಿ ಮಾತಿನ ಚಕಮಕಿ ಆರಂಭವಾಗಿದೆ.

ಅಷ್ಟರಲ್ಲಿ ಸ್ಥಳದಲ್ಲಿದ್ದ ಗ್ರಾಮಸ್ಥರು, ಎರಡು ವಾಹನದಲ್ಲಿದ್ದವರನ್ನು ಸಮಾಧಾನ ಮಾಡಲು ಯತ್ನಿಸಿದ್ದು,  ಕೆಲ ಸಮಯದ ಬಳಿಕ ಆಟೋದಲ್ಲಿದ್ದ ಮಹಿಳೆ ಸೇರಿದಂತೆ ಮೂವರು ಏಕಾಏಕಿ ದಾಳಿ ನಡೆಸಿ ಗುಂಗ್ರಾಲ್‌ ಛತ್ರದ ರಾಹುಲ್‌, ಕಿರಣ್‌, ಸರ್ವಾಗ್‌, ಸ್ವಾಮಿ ಹಾಗೂ ಹರೀಶ್‌ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಹಲ್ಲೆ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ.  ಗಾಯಾಳುಗಳು ನೀಡಿದ ದೂರಿನ ಮೇರೆಗೆ ಇಲವಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

admin
the authoradmin

Leave a Reply