ಹಸಿರು ಕ್ರಾಂತಿಯ ಕಾಯಕಯೋಗಿಗೆ ನಮನ… ಇದೊಂದು ಸುಂದರ ಮರೆಯಲಾಗದ ಪಯಣದ ಮೆಲುಕು
ಸವಿ ಸವಿ ನೆನಪಿನ ಪಯಣ-5

ಅದು ಜ್ಞಾನ ಮತ್ತು ಸಂಸ್ಕಾರದ ಸಮ್ಮಿಲನದ ಸುಂದರ ಶುಕ್ರವಾರ. ಬೋಗಾದಿಯ ದೀಪಾ ಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಮುಗಿಸಿಕೊಂಡಾಗ ಮನಸ್ಸಿನಲ್ಲಿ ಕೃತಾರ್ಥ ಭಾವವಿತ್ತು. ಆ ಧನ್ಯತೆಯ ಕ್ಷಣಗಳ ಬೆನ್ನಲ್ಲೇ ಮತ್ತೊಂದು ಸುಂದರ ಪಯಣಕ್ಕೆ ಮುನ್ನುಡಿ ಬರೆಯಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ನ್ಯಾಯಾಧೀಶರಾದ ಶ್ರೀ ಅರಳಿ ನಾಗರಾಜ ಗಂಗಾವತಿ ಅವರನ್ನು ಮಂಡ್ಯದ ಪರಿವೀಕ್ಷಣಾ ಮಂದಿರಕ್ಕೆ (Inspection Bungalow) ತಲುಪಿಸುವ ಜವಾಬ್ದಾರಿ ನಮ್ಮದಾಗಿತ್ತು. ನ್ಯಾಯಾಧೀಶರನ್ನು ಗೌರವದಿಂದ ಕರೆದೊಯ್ಯಲು ನಾನು ಮತ್ತು ನನ್ನ ಧರ್ಮಪತ್ನಿ ಮಂಡ್ಯದ ಕಡೆಗೆ ಪಯಣ ಬೆಳೆಸಿದೆವು. ದಾರಿಯುದ್ದಕ್ಕೂ ಹರಟುತ್ತಾ, ನೆನಪಿನ ಬುತ್ತಿಯೊಂದನ್ನು ಸೃಷ್ಟಿಸಿಕೊಳ್ಳಲು ಮಾರ್ಗಮಧ್ಯೆ ಒಂದು ಸುಂದರ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಂಡೆವು. ಇದೇ ವೇಳೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬರುತ್ತಿದ್ದ ನನ್ನ ಮಗ ಗಿರಿಜೇಶನಿಗೆ ಮಂಡ್ಯದಲ್ಲೇ ಇಳಿಯುವಂತೆ ತಿಳಿಸಿದ್ದೆವು. ಮಂಡ್ಯ ರೈಲ್ವೆ ನಿಲ್ದಾಣ ತಲುಪಿ, ಅವನನ್ನೂ ನಮ್ಮೊಂದಿಗೆ ಸೇರಿಸಿಕೊಂಡಾಗ ನಮ್ಮ ಪ್ರವಾಸಕ್ಕೊಂದು ಕೌಟುಂಬಿಕ ಕಳೆ ಬಂದಿತು.

ಶ್ರೀ ಶಿವಕುಮಾರ ಸ್ವಾಮೀಜಿ ಉದ್ಯಾನವನದತ್ತ…
ನಮ್ಮ ಈ ಪಯಣದ ಪ್ರಮುಖ ಉದ್ದೇಶ ಮಂಡ್ಯದಲ್ಲಿರುವ ಒಂದು ಆಕರ್ಷಕ ತಾಣಕ್ಕೆ ಭೇಟಿ ನೀಡುವುದಾಗಿತ್ತು. ಅದು ನಮ್ಮ ಆತ್ಮೀಯರು, ಕಾಯಕಯೋಗಿ ಫೌಂಡೇಷನ್ನ ಸಂಸ್ಥಾಪಕರೂ ಆದ ಶ್ರೀ ಶಿವಕುಮಾರ್ ಅವರು ನಿರ್ಮಿಸಿರುವ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನ ನ್ಯಾಯಾಧೀಶರಿಗೆ ಈ ಸುಂದರ ತಾಣವನ್ನು ಪರಿಚಯಿಸುವ ಹಂಬಲ ನಮ್ಮದಾಗಿತ್ತು. ಉದ್ಯಾನವನವನ್ನು ಪ್ರವೇಶಿಸುತ್ತಿದ್ದಂತೆ ನಮಗೆ ಎದುರಾಗಿದ್ದು ಹಸಿರಿನ ಸ್ವರ್ಗ! ಶಿವಕುಮಾರ್ ಅವರು ಈ ಉದ್ಯಾನವನವನ್ನು ಅತ್ಯಂತ ಸ್ವಚ್ಛವಾಗಿ, ಸುಂದರವಾಗಿ ಕಣ್ಣಿಗೆ ಹಬ್ಬವಾಗುವಂತೆ ರೂಪಿಸಿದ್ದಾರೆ. ಇಡೀ ಉದ್ಯಾನವನ ಯಾವಾಗಲೂ ಹಸಿರಿನಿಂದ ಕಂಗೊಳಿಸಬೇಕು ಎಂಬ ಧಾವಂತದಿಂದ ಸ್ವಂತ ಪರಿಶ್ರಮದಲ್ಲಿ ಎರಡು ಬೋರ್ವೆಲ್ಗಳನ್ನು ಕೊರೆಯಿಸಿ, ನೀರು ಉಣಿಸುತ್ತಿದ್ದಾರೆ. ಅವರ ಈ ನಿಸ್ವಾರ್ಥ ಪರಿಶ್ರಮ ನಿಜಕ್ಕೂ ಮಹತ್ತರವಾದದ್ದು.
ಉಸಿರಾದ ನಡೆದಾಡುವ ದೇವರು
ಅಲ್ಲಿನ ಪ್ರತಿಯೊಂದು ಗಿಡ ಮರಗಳನ್ನು ನೋಡಿದರೆ, ಅವುಗಳಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರಮಹಾಸ್ವಾಮೀಜಿಗಳೇ ಉಸಿರಾಡುತ್ತಿದ್ದಾರೇನೋ ಎಂಬಂತೆ ಶಿವಕುಮಾರ್ ಅವರು ಪ್ರತಿಯೊಂದು ಸಸಿಗಳನ್ನು ಜೋಪಾನ ಮಾಡುತ್ತಿದ್ದಾರೆ. ಲೋಕದಲ್ಲಿ ಎಲ್ಲರ ಹೃದಯ ‘ಲಬ್ ಡಬ್’ ಎಂದು ಬಡಿದುಕೊಂಡರೆ, ನಮ್ಮ ಕಾಯಕಯೋಗಿ ಶಿವಕುಮಾರ್ ಅವರ ಹೃದಯ ‘ಶಿವಕುಮಾರ ಸ್ವಾಮೀಜಿ… ಶಿವಕುಮಾರ ಸ್ವಾಮೀಜಿ…’ ಎಂದು ಬಡಿದುಕೊಳ್ಳುತ್ತದೆ ಎಂದರೆ ಅದರಲ್ಲಿ ಅತಿಶಯೋಕ್ತಿಯೇನಿಲ್ಲ! ಪರಮಪೂಜ್ಯರ ಮೇಲಿನ ಭಕ್ತಿ, ಪ್ರೀತಿಗಾಗಿ ಅವರು ತಮ್ಮ ಜೀವವನ್ನೇ ಮುಡುಪಾಗಿಟ್ಟು ಈ ಕಾಯಕ ಮಾಡುತ್ತಿದ್ದಾರೆ.

ಉದ್ಯಾನವನದ ಆವರಣದಲ್ಲಿ ಒಂದು ಸುಂದರವಾದ ಕುಟೀರವನ್ನು ನಿರ್ಮಿಸಿ, ಅದರಲ್ಲಿ ಪರಮಪೂಜ್ಯ ಶಿವಕುಮಾರಮಹಾಸ್ವಾಮೀಜಿಗಳ ಭವ್ಯ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಮಂಡ್ಯದ ಮುಖ್ಯ ರಸ್ತೆಯಲ್ಲಿ ಹಾದುಹೋಗುವ ಪ್ರತಿಯೊಬ್ಬ ಪಾದಚಾರಿಯನ್ನೂ, ವಾಹನ ಸವಾರರನ್ನೂ ಕೈಬೀಸಿ ಕರೆಯುವಂತೆ ಈ ಆಕರ್ಷಕ ವಾತಾವರಣ ಮೂಡಿಬಂದಿದೆ. ನಾನು, ನನ್ನ ಪತ್ನಿ, ಮಗ ಹಾಗೂ ನ್ಯಾಯಾಧೀಶರು ಆ ಪವಿತ್ರ ಸ್ಥಳವನ್ನು ಕಣ್ತುಂಬಿಸಿಕೊಂಡು, ಮನತುಂಬಿಸಿಕೊಂಡು ಧನ್ಯರಾದೆವು.
ಆದರ ಆತಿಥ್ಯ ಹಾಗೂ ಮರು ಪಯಣ

ಆ ಅದ್ಭುತ ಉದ್ಯಾನವನದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀ ಅರಳಿ ನಾಗರಾಜ ಗಂಗಾವತಿ ಅವರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವ ಸಮರ್ಪಣೆಯನ್ನು ಶಿವಕುಮಾರ್ ಅವರು ಸಲ್ಲಿಸಿದರು. ತದನಂತರ ನ್ಯಾಯಾಧೀಶರನ್ನು ನಮ್ಮ ಕಾರಿನಲ್ಲಿಯೇ ಗೌರವದಿಂದ ಕೂರಿಸಿಕೊಂಡು ಮಂಡ್ಯದ ಪರಿವೀಕ್ಷಣಾ ಮಂದಿರಕ್ಕೆ (IB) ಕರೆತಂದು ಸುರಕ್ಷಿತವಾಗಿ ಮುಟ್ಟಿಸಿದೆವು.
ಅಲ್ಲಿ ನ್ಯಾಯಾಧೀಶರು ನಮ್ಮ ಮೇಲಿನ ಪ್ರೀತಿಯಿಂದ “ಚಹಾ ಕುಡಿದು ಹೋಗಿ” ಎಂದು ಅತ್ಯಂತ ಆದರದಿಂದ ಆಹ್ವಾನಿಸಿದರು. ಆದರೆ ಆಗಲೇ ರಾತ್ರಿಯಾಗುತ್ತ ಬಂದಿದ್ದರಿಂದ, “ಇಲ್ಲ ಸರ್, ಸಮಯವಾಗುತ್ತದೆ, ಪ್ರಯಾಣಿಸಬೇಕಿರುವುದರಿಂದ ಹೊರಡುತ್ತೇವೆ” ಎಂದು ವಿನಮ್ರವಾಗಿ ತಿಳಿಸಿ, ಅವರ ಪ್ರೀತಿಯ ಆತಿಥ್ಯಕ್ಕೆ ಧನ್ಯವಾದ ಹೇಳಿ ಅಲ್ಲಿಂದ ಬೀಳ್ಕೊಟ್ಟೆವು.

ಮಂಡ್ಯದಿಂದ ಹೊರಟು ರಾತ್ರಿ ಸರಿಯಾಗಿ 10 ಗಂಟೆಗೆ ನಾವು ಮೈಸೂರನ್ನು ತಲುಪಿದೆವು. ದಾರಿಯುದ್ದಕ್ಕೂ ಆ ಉದ್ಯಾನವನದ ಹಸಿರು ನಮ್ಮ ಕಣ್ಣಿಗೆ ಅಚ್ಚೊತ್ತಿದಂತಿತ್ತು. “ಇಂತಹ ಪ್ರಕೃತಿ ಪ್ರೇಮಿಗಳು, ಉದ್ಯಾನವನಗಳನ್ನು ದೇವಸ್ಥಾನದಂತೆ ಕಾಯುವ ಕಾಯಕಯೋಗಿಗಳು ಈ ನಾಡಿನಲ್ಲಿ ಸಾವಿರವಾಗಲಿ. ಇಡೀ ಕನ್ನಡ ನಾಡು ಮಾತ್ರವಲ್ಲ, ಇಡೀ ಪ್ರಪಂಚವೇ ಹಸಿರಿನಿಂದ ಕಂಗೊಳಿಸಲಿ.
ಶಿವಕುಮಾರ್ ಅವರಂತಹ ನಿಸ್ವಾರ್ಥ ಮನಸ್ಸುಗಳ ಸಂತತಿ ಲಕ್ಷವಾಗಲಿ, ಅವರ ಸಂಖ್ಯೆ ಅಕ್ಷಯವಾಗಲಿ” ಎಂದು ಮನದಲ್ಲೇ ಪ್ರಾರ್ಥಿಸುತ್ತಾ ನಮ್ಮ ಮನೆ ಸೇರಿದೆವು. ಈ ಪಯಣ ಕೇವಲ ಪ್ರವಾಸವಾಗಿರಲಿಲ್ಲ, ಅದೊಂದು ಹಸಿರು, ಭಕ್ತಿ ಮತ್ತು ಬಾಂಧವ್ಯದ ದಿವ್ಯ ಅನುಭವವಾಗಿ ನಮ್ಮೆದೆಯ ಪುಟಗಳಲ್ಲಿ ಶಾಶ್ವತವಾಗಿ ಉಳಿಯಿತು.

ಅಕ್ಷರ ಲೋಕದ ಅನುಭವ ಮಂಟಪ… ಹೃದಯ ಗೆದ್ದ ವಚನ ಪ್ರವಾಸ.. ಇದು ಸುಂದರ ಸಂಗಮದ ಕಥನ







