ಹುಣಸೂರು(ಮನುಕುಮಾರ್): ತಾಲ್ಲೂಕಿನ ಹನಗೋಡು ಹೋಬಳಿಯ ಕೂಡ್ಲೂರು ಹೊಸ ಕೋಟೆಯಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿ ಕೊಂಡಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಸಾಕಾನೆಗಳ ಸಹಾಯದಿಂದ ಹುಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಯಾರ ಕಣ್ಣಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿದೆ.
ಭಾನುವಾರ ಮಧ್ಯಾಹ್ನ ವೇಳೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದುಬಾರೆ ಆನೆ ಶಿಬಿರದಿಂದ ಅಜೇಯ ಮತ್ತು ಇಂದ್ರ ಆನೆಗಳನ್ನು ಕರೆತಂದು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.
ಹುಲಿ ಸೆರೆ ಕಾರ್ಯಾಚರಣೆಗಾಗಿ ಕಳೆದೆರಡು ದಿನಗಳಿಂದ 25ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಡ್ರೋಣ್ ಕ್ಯಾಮರಾ ಮೂಲಕ ಕಾರ್ಯಾಚರಣೆ ನಡೆಸಿದ್ದ ವೇಳೆ ಶುಕ್ರವಾರ ರಾತ್ರಿ ಸುಮಾರು ನಾಲ್ಕು ವರ್ಷದ ಹುಲಿ ಕಾಣಿಸಿಕೊಂಡಿದೆ. ಆದರೆ ಎರಡು ದಿನಗಳಿಂದ ಜನರ ಕೂಗಾಟದಿಂದ ಈ ಸ್ಥಳದಿಂದ ಬೇರೆಡೆ ಹೋಗಿರಬಹುದು, ಇದೀಗ ಕಾಣಿಸುತ್ತಿಲ್ಲ.

ಇದೀಗ ಢ್ರೋಣ್ ಮೂಲಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ, ದುಬಾರೆಯಿಂದ ಕರೆ ತಂದಿರುವ ಅಜೇಯ ಮತ್ತು ಇಂದ್ರ ಸಾಕಾನೆಗಳಿಂದಲೂ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸಿಎಫ್ ಕಿರಣ್ ಕುಮಾರ್ ಹಾಗೂ ಪಶುವೈದ್ಯಾಧಿಕಾರಿ ಡಾ.ರಮೇಶ್ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ್ದಾರೆ.
ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಹುಲಿ ಸೆರೆ ಹಿಡಿಯಲು ಅರಣ್ಯ ಸಚಿವ ರಾಮಲಿಂಗರೆಡ್ಡಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಕೋರಿದನ್ನು ಹಾಗೂ ಹುಲಿ ದಾಳುಯಿಂದ ಜಾನುವಾರುಗಳನ್ನು ಕಳೆದುಕೊಂಡು ಆಕ್ರೋಶಿತ ರೈತರನ್ನು ಮನವೊಲಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.








