ArticlesLatest

ಕಸ್ತೂರಿರಂಗನ್ ವರದಿಗೆ ಕೊಡಗಿನಲ್ಲಿ ತೀವ್ರ ವಿರೋಧ… 16ವರ್ಷದಿಂದ ತೂಗುಕತ್ತಿ!

ಕಸ್ತೂರಿ ರಂಗನ್ ವರದಿ ಬಂದಾಗಲೆಲ್ಲಾ ಕೊಡಗಿನಲ್ಲಿ ನಡೆಯುವುದು ಒಂದೇ ಚರ್ಚೆ – ಇದನ್ನು ಯಾರು ಮಾಡಿದರು, ಯಾರು ಬಿಡಿಸಿದರು ಎಂಬುದು. ಎಲ್ಲಾ ಪಕ್ಷದ ನಾಯಕರಲ್ಲಿ ನನ್ನದೊಂದು ಮನವಿ – ದಯವಿಟ್ಟು ಇದನ್ನು ಯಾರ ವೈಯಕ್ತಿಕ ಸಾಧನೆ ಎಂದು ಬಿಂಬಿಸಬೇಡಿ. ಇದು ಯಾರದೋ ಸಾಧನೆ ತೋರಿಸುವ ಸಮಯವಲ್ಲ, ಇದು ಕೊಡಗನ್ನು ಉಳಿಸಿಕೊಳ್ಳುವ ಸಮಯ!

ಇದುವರೆಗೂ ಈ ಕಾನೂನಿಗೆ ಶಾಶ್ವತವಾಗಿ ತಡೆ ಬಿದ್ದಿಲ್ಲ, ಕಡತ ವಾಪಸ್ ಹೋಗಿಲ್ಲ. ಹಾಗಿರುವಾಗ ನಾವು ಒಳಜಗಳ ಮಾಡಿದರೆ ಕೊಡಗು ಉಳಿಯುವುದಿಲ್ಲ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ.

ಈ ಹೋರಾಟ ನಿನ್ನೆ ಮೊನ್ನೆಯದಲ್ಲ…

2010ರಲ್ಲಿ ಗಾಡ್ಗಿಲ್ ಸಮಿತಿ ಬಂತು. 2011ರಲ್ಲಿ ಅದು ಅತ್ಯಂತ ಕಠಿಣ ವರದಿ ಕೊಟ್ಟಿತು. ಎಲ್ಲಾ ರಾಜ್ಯಗಳು ವಿರೋಧಿಸಿದಾಗ 2012ರಲ್ಲಿ ಕಸ್ತೂರಿರಂಗನ್ ಸಮಿತಿ ಬಂತು, 2013ರಲ್ಲಿ ವರದಿ ಬಂತು. ಅಂದಿನಿಂದ 2026ರ ಜುಲೈ ವರೆಗೆ 7 ಬಾರಿ ಕರಡು ಅಧಿಸೂಚನೆ ಬಂದಿದೆ. ಪ್ರತಿ ಬಾರಿಯೂ ಕರ್ನಾಟಕದ 20,668 ಚ.ಕಿ.ಮೀ ಪ್ರದೇಶವನ್ನು ಗುರುತಿಸಲಾಗಿದೆ, ಅದರಲ್ಲಿ ಹೆಚ್ಚಿನ ಪರಿಣಾಮ ಕೊಡಗಿನ ಮೇಲೆ. ಅಂದರೆ 16 ವರ್ಷಗಳಿಂದ ನಮ್ಮ ತಲೆಯ ಮೇಲೆ ಈ ಕತ್ತಿ ನೇತಾಡುತ್ತಲೇ ಇದೆ.

ಕೊಡಗಿನವರಾದ ನಮಗೆ ಪರಿಸರ ಬೇಡವಾ?

ಖಂಡಿತ ಬೇಕು! ಕೊಡಗಿನ ಕಾಡನ್ನು ಉಳಿಸಿದವರು ಬೇರೆ ಯಾರೋ ಅಲ್ಲ, ನಾವೇ! ನಮ್ಮ ತಾತ-ಮುತ್ತಾತರು. ಹಾಗೂ ಈಗಿನ ಪೀಳಿಗೆಯು ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಆದರೆ ಪರಿಸರದ ಹೆಸರಿನಲ್ಲಿ ರೈತನ ಬದುಕಿಗೆ ತೊಂದರೆಯಾಗಬಾರದು. ಒಬ್ಬ ರೈತ ತನ್ನ ತೋಟದಲ್ಲಿ ಪಂಪ್ ಶೆಡ್ ಹಾಕಲು, ತನ್ನ ಮಗನಿಗೆ ಮನೆ ಕಟ್ಟಲು ವರ್ಷಗಟ್ಟಲೆ ಕಾಯುವ ಸ್ಥಿತಿ ಬಂದರೆ ಅದು ನಿಜವಾದ ಸಂರಕ್ಷಣೆಯಾಗುವುದಿಲ್ಲ.

ಹಾಗಾದರೆ ನಮಗೆ ಪರ್ಯಾಯ ಮಾರ್ಗ ಏನು?

ವರದಿ ಬೇಡ ಎಂದ ಮಾತ್ರಕ್ಕೆ ಪರಿಸರ ನಾಶ ಮಾಡಬೇಕು ಎಂದಲ್ಲ. ಪರಿಸರವನ್ನು ಉಳಿಸಲು ನಮ್ಮಲ್ಲೇ ಉತ್ತಮ ಮಾರ್ಗಗಳಿವೆ… ಅನಿಯಂತ್ರಿತ ವಾಣಿಜ್ಯ ಚಟುವಟಿಕೆಗಳಿಗೆ ಕಡಿವಾಣ.

ಕೊಡಗಿನ ಕಾಡು ನಾಶವಾಗುತ್ತಿರುವುದು ಸಣ್ಣ ರೈತರಿಂದ ಅಲ್ಲ. ಕೃಷಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವುದರಿಂದ. ಕೃಷಿ ಭೂಮಿಯನ್ನು ಕೊಂಡು ದೊಡ್ಡ ರೆಸಾರ್ಟ್, ಹೋಂ-ಸ್ಟೇ ಮಾಡುವುದನ್ನು ನಿಯಂತ್ರಿಸಲು ಕಾನೂನು ತರಬೇಕು.

ಬೇಕಾಬಿಟ್ಟಿ ಲೇಔಟ್, ಸೈಟ್ ವ್ಯವಹಾರಕ್ಕೆ ಬ್ರೇಕ್

ಕಾಫಿ ತೋಟಗಳನ್ನು ಪ್ಲಾಟ್ ಮಾಡಿ ಮಾರುವ ಪ್ರಕ್ರಿಯೆಗೆ ಕಠಿಣ ಭೂಪರಿವರ್ತನಾ ನಿಯಮ ತರಬೇಕು. ಇದು ಪರಿಸರಕ್ಕೂ ಒಳ್ಳೆಯದು, ಕೊಡಗಿಗೂ ಒಳ್ಳೆಯದು. ಕಾಫಿ ಬೆಳೆಗಾರರಿಗೆ ಉತ್ತೇಜನ ನೀಡಬೇಕು… ಪರಿಸರವನ್ನು ಉಳಿಸುವ ನಿಜವಾದ ಕಾವಲುಗಾರರು ಕಾಫಿ ಬೆಳೆಗಾರರು. ಅವರಿಗೆ ಉತ್ತೇಜನ ನೀಡುವ ಯೋಜನೆಗಳು ಬೇಕು. ಕೊಡಗಿನಿಂದಲೇ ಒಂದು ಪ್ರತ್ಯೇಕ ಆಯೋಗ ರಚನೆಯಾಗಬೇಕು.

ಹೊರಗಿನಿಂದ ಬರುವ ವರದಿಗಿಂತ ಕೊಡಗಿನ ಮಣ್ಣಿನ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಆದ್ದರಿಂದ ‘ಕೊಡಗು ಪರಿಸರ ಮತ್ತು ರೈತ ಸಂರಕ್ಷಣಾ ಆಯೋಗ’ ವನ್ನು ರಚಿಸಲಿ. ಅದರಲ್ಲಿ ಕೊಡಗಿನ ರೈತರು, ಪರಿಸರ ತಜ್ಞರು, ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಇರಲಿ. ಆ ಆಯೋಗ ಕೊಡುವ ವರದಿಯೇ ಕೊಡಗಿಗೆ ಅಂತಿಮವಾಗಿರಲಿ.

ಇಂದು ಒಂದು ಸಣ್ಣ ತಿದ್ದುಪಡಿಗೆ ಒಪ್ಪಿಕೊಂಡರೆ…

ಇಂದು “ಒಂದು ಸಣ್ಣ ತಿದ್ದುಪಡಿ” ಎಂದು ನಾವು ಒಪ್ಪಿಕೊಂಡರೆ, ನಾಳೆ ಅದೇ ಕಾನೂನಿಗೆ ಮತ್ತೆ ಮತ್ತೆ ತಿದ್ದುಪಡಿ ತಂದು ಇನ್ನಷ್ಟು ಕಟ್ಟುನಿಟ್ಟು ಮಾಡುವ ಸಾಧ್ಯತೆ ಇದೆ. ಆದ್ದರಿಂದ ಆರಂಭದಲ್ಲೇ ನಾವು ಎಚ್ಚರವಾಗಿರಬೇಕು. ಆದ್ದರಿಂದ ನಮ್ಮ ಒಂದೇ ನಿಲುವು, ಒಂದೇ ಧ್ವನಿ – ರೈತರ ಬದುಕಿಗೆ ತೊಂದರೆಯಾಗುವ ಯಾವುದೇ ವರದಿ ನಮಗೆ ಬೇಡ. ನಮಗೆ ಕೊಡಗಿನ ನೆಲದ ವರದಿ ಬೇಕು! ನನಗೆ ಕ್ರೆಡಿಟ್ ಬೇಡ, ನಿಮಗೆ ಕ್ರೆಡಿಟ್ ಬೇಡ. ನಮಗೆ ಕೊಡಗು ಉಳಿಯಬೇಕು ಅನ್ನುವ ಮನಸ್ಥಿತಿ ಎಲ್ಲರದ್ದು ಆಗಲಿ.

ಎಲ್ಲಾ ಪಕ್ಷಗಳು, ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ರೈತ ಸಂಘಗಳು ಒಂದೇ ವೇದಿಕೆಯಲ್ಲಿ ನಿಂತು ಒಂದೇ ಮಾತು ಹೇಳೋಣ. ಎಲ್ಲರದು ಒಂದೇ ಧ್ವನಿಯಾಗಿರಲಿ, ಅದು ಕೊಡಗಿನ ನೈಜ ಧ್ವನಿಯಾಗಿರಲಿ!

 

admin
the authoradmin

ನಿಮ್ಮದೊಂದು ಉತ್ತರ