ಯಳಂದೂರು(ನಾಗರಾಜ ವೈ.ಕೆ.ಮೋಳೆ): ಪಟ್ಟಣದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಯಳಂದೂರು ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಎಂ.ಎಸ್. ಪವನ್ ಕುಮಾರ್ ಅವರು ಉದ್ಘಾಟಿಸಿ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಿದರು. ಹಣಕಾಸು ವಂಚನೆ, ಜಾಬ್ ವಂಚನೆ, ಎಪಿಕೆ ಫೈಲ್, ಇನ್ವೆಸ್ಟ್ ಮೆಂಟ್ ವಂಚನೆ, ಡಿಜಿಟಲ್ ಅರೆಸ್ಟ್ ಮತ್ತು ಗಿಫ್ಟ್ ಕಾರ್ಡ್ ವಂಚನೆಗಳ ಬಗ್ಗೆ ವಿವರಿಸಿ, ಅಪರಿಚಿತ ಲಿಂಕ್ ಕ್ಲಿಕ್ ಮಾಡಬಾರದು, ಅನುಮಾನ ಬಂದರೆ ತಕ್ಷಣ 1930 ಗೆ ಕರೆ ಮಾಡಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಲಾವಣ್ಯ ಸಿ. ಅವರು ಮಹಿಳೆಯರ ಋತುಚಕ್ರದ ಸಮಸ್ಯೆಗಳು ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾದ ಜಿಲ್ಲಾ ನಿರ್ದೇಶಕ ದಿನೇಶ್ ಅವರು ಯೋಜನೆಯಿಂದ ದೊರೆಯುವ ಸೌಲಭ್ಯಗಳು, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಜ್ಞಾನವಿಕಾಸ ಕೇಂದ್ರಗಳ ಮಹತ್ವದ ಬಗ್ಗೆ ಮಾತನಾಡಿದರು.
ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಭೀಮಪ್ಪ ವೈ.ಎಸ್., ಯೋಜನಾಧಿಕಾರಿಗಳಾದ ಆನಂದ ಗೌಡ, ಮುಕಾಂಬಿಕಾ, ಕ್ರೈಂ ಬ್ರಾಂಚ್ ಎಎಸ್ಐ ರಮ್ಯಾ, ಆಪ್ತ ಸಮಾಲೋಚಕಿ ಶ್ವೇತಾ, ಸಮನ್ವಯಾಧಿಕಾರಿ ಸಿಂಧು ಸೇರಿದಂತೆ ಹಲವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಜ್ಞಾನವಿಕಾಸ ಕೇಂದ್ರಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.








