LatestMysore

ಹನಗೋಡು ಪ್ರಜಾಸೇವೆ ಆಂದೋಲನದಲ್ಲಿ ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ಷೇಪ

 ಹುಣಸೂರು(ಮನುಕುಮಾರ್): ಹನಗೋಡಲ್ಲಿ ಗಣಿಗಾರಿಕೆ ನಡೆದ ಸ್ಥಳದಲ್ಲಿ ಬಡಾವಣೆ ನಿರ್ಮಾಣಕ್ಕೆ ಆಕ್ಷೇಪ… ಹನಗೋಡು ಸೊಸೈಟಿಯಿಂದ ಸಾಲ ವಿತರಣೆಗೆ ರೈತರ ಆಗ್ರಹ… ಪರಿಸರ ಸೂಕ್ಷ್ಮ ವಲಯಕ್ಕೆ ವಿರೋಧ… ಗ್ರಾ.ಪಂ.ನಲ್ಲಿ ಇ-ಸ್ವತ್ತು ಸೇರಿದಂತೆ ಯಾವುದೇ ದಾಖಲಾತಿ ನೀಡುತ್ತಿಲ್ಲ…ಮಾಸಾಶನ ಹಣ ಬರುತ್ತಿಲ್ಲ… ನಿವೇಶನ ವಿತರಿಸಿ… ಇದು  ತಾಲೂಕಿನ ಹನಗೋಡಿ ನಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಕೇಳಿಬಂದ ಆಗ್ರಹಗಳು..

ಹನಗೋಡು-ಹುಣಸೂರು ಮುಖ್ಯರಸ್ತೆ ಬದಿಯಲ್ಲಿದ್ದ ಮ್ಯಾಗ್ನಸೈಟ್ ಗಣಿಗಾರಿಕೆ ಸ್ಥಳದಲ್ಲಿ ನೂರು ಅಡಿ ಆಳ ಮಾಡಿದ್ದ ಭೂಮಿಯಲ್ಲಿ ಬಡಾವಣೆ ರಚಿಸುತ್ತಿದ್ದು, ಅನುಮತಿ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇ.ಒ.ಹೊಂಗಯ್ಯ, “ಹಿಂದಿನ ಗ್ರಾ.ಪಂ.ಆಡಳಿತ ಮಂಡಳಿ ತೀರ್ಮಾನದಂತೆ ಶೇ.40ರಷ್ಟು ನಿವೇಶನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು, ಇದರಿಂದ ಅನಾಹುತವಾಗಲಿದ್ದು, ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಸೊಸೈಟಿ ಸಾಲ ಕೊಡಿಸಿ: ಹನಗೋಡು ಸೊಸೈಟಿಯಲ್ಲಿ ರೈತರು ಸಾಲ ಮರುಪಾವತಿಸಿದ್ದರೂ ಎನ್‌ಒಸಿ ಹಾಗೂ ಹೊಸ ಸಾಲ ನೀಡುತ್ತಿಲ್ಲ. ಸಹಕಾರ ಇಲಾಖೆ, ಎಂಡಿಸಿಸಿ ಬ್ಯಾಂಕ್ ಕ್ರಮವಹಿಸದೆ ತೊಂದರೆಯಾಗಿದ್ದು, ತಕ್ಷಣವೇ ಸಾಲ ವಿತರಣೆಗೆ ಕ್ರಮವಹಿಸಬೇಕು ಎಂದು ರೈತರು ಆಗ್ರಹಿಸಿ, ಸಹಕಾರ ಇಲಾಖೆ ಅಧಿಕಾರಿಗಳು ಗೈರಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ದಾಸನಪುರದಲ್ಲಿ ಶಾಲಾ ನಿವೇಶನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಯಿತು.

ಹಾಡಿಗಳ ಮನೆ ಕಾಮಗಾರಿ ಕಳಪೆ: ಹಾಡಿಗಳಲ್ಲಿ ಗುಂಪು ಮನೆ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಕಳಪೆಯಾಗಿದೆ. ಶೇ.30ರಷ್ಟು ಮನೆಗಳು ಮಾತ್ರ ನಿರ್ಮಾಣಗೊಂಡಿವೆ ಎಂದು ದಸಂಸದ ದೊಡ್ಡಹೆಜೂರು ನಾಗೇಶ್ ಆರೋಪಿಸಿದರು.

ಮಾಸಾಶನ ನಿವೇಶನಕ್ಕೆ ಬೇಡಿಕೆ: ಸಭೆಯಲ್ಲಿ 40ಕ್ಕೂ ಹೆಚ್ಚು ಮಂದಿ ಮಾಸಾಶನ ಮಂಜೂರು ಮಾಡುವಂತೆ ಕೋರಿದರೆ, ಹಲವು ಫಲಾನುಭವಿಗಳು ಮಾಸಾಶನ 3-4 ತಿಂಗಳಿನಿಂದ ಬರುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, “ಸೂಕ್ತ ದಾಖಲೆ ಸಲ್ಲಿಸಿದಲ್ಲಿ ಹಣ ಬರಲಿದೆ,” ಎಂದು ತಿಳಿಸಿದರು. ಹಲವೆಡೆ ವಿದ್ಯುತ್ ಕಂಬಗಳು ಡ್ಯಾಮೇಜ್ ಆಗಿವೆ. ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ್ದರೂ ತೆರವುಗೊಳಿಸುತ್ತಿಲ್ಲ ಎಂಬ

ಪರಿಸರ ಸೂಕ್ಷ್ಮವಲಯದಿಂದ ಕೈಬಿಡಿ: ಅರಣ್ಯ ಇಲಾಖೆಯು ಕಾಡಂಚಿನ ಗಡಿಯಿಂದ 7.5 ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮವಲಯ ಎಂದು ಘೋಷಿಸಿರುವುದರಿಂದ ನಾಗರಹೊಳೆ ಉದ್ಯಾನದಂಚಿನ ಹನಗೋಡು ಹೋಬಳಿಯ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳು ಇದರ ವ್ಯಾಪ್ತಿಗೆ ಒಳಪಡಲಿವೆ. ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಪರಿಶೀಲಿಸಿ, ಅರ್ಹವಲ್ಲದ ಗ್ರಾಮಗಳನ್ನು ಪರಿಸರ ಸೂಕ್ಷವಲಯದ ವ್ಯಾಪ್ತಿಯಿಂದ ಕೈಬಿಡಬೇಕು,” ಎಂಬ ತಾ.ಪಂ. ಮಾಜಿ ಸದಸ್ಯ ಗಣಪತಿ ಮನವಿಗೆ, “ಈ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಲಾಗುವುದು,” ಎಂದು ತಹಸೀಲ್ದಾರ್ ತಿಳಿಸಿದರು. ದೂರಿಗೆ ತಕ್ಷಣವೇ ಕ್ರಮವಹಿಸುವಂತೆ ಸೂಚಿಸಲಾಯಿತು. ನಿವೇಶನಗಳಿಗೂ ಸಾಕಷ್ಟು ಬೇಡಿಕೆ ಬಂತು. ಹಲವೆಡೆ ಹೊಸ ನ್ಯಾಯಾಬೆಲೆ ಅಂಗಡಿಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.

ತಹಸೀಲ್ದಾರ್ ಜೆ. ಮಂಜುನಾಥ್ ಆಂದೋಲನ ಉದ್ಘಾಟಿಸಿದರು. ಎಡಿಎಲ್‌ಆರ್ ಸಿದ್ದೇಗೌಡ, ಉಪ ತಹಸೀಲ್ದಾ‌ರ್ ಶರತ್‌ಕುಮಾರ್, ಶಿರಸ್ತೇದಾ‌ರ್ ಶ್ರೀಪಾದ್ ನಾಲತವಾಡಕರ್, ಚುನಾವಣಾ ಶಿರಸ್ತೇದಾರ್ ಪ್ರಕಾಶ್, ರಾಜಸ್ವ ನಿರೀಕ್ಷಕ ನಂದೀಶ್, ಆಹಾರ ಇಲಾಖೆ ಶಿರಸ್ತೇದಾ‌ರ್ ಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.

54 ಅರ್ಜಿ ವಿಲೇವಾರಿ…

ಕಂದಾಯ ಇಲಾಖೆಗೆ ಬಂದಿದ್ದ ಮಾಸಾಶನ ಸ್ಥಗಿತಗೊಂಡಿದ್ದ 69 ಅರ್ಜಿಗಳ ಪೈಕಿ ಸ್ಥಳದಲ್ಲೇ 54 ಫಲಾನುಭವಿಗಳಿಗೆ ಮರು ಮಂಜೂರಾತಿ ಪತ್ರ ವಿತರಿಸಲಾಯಿತು. ಒಟ್ಟು 124 ಅರ್ಜಿ ಸ್ವೀಕಾರಗೊಂಡವು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಹಸೀಲ್ದಾ‌ರ್ ತಿಳಿಸಿದರು.

admin
the authoradmin

ನಿಮ್ಮದೊಂದು ಉತ್ತರ