ArticlesLatestLife style

ಕೊಡಗಿನ ‘ನಾಳೆ’ ನಮ್ಮ ಕೈಯಲ್ಲಿದೆ…. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-28

ಕೊಡಗಿನಲ್ಲಿ ಮೂಲ ನಿವಾಸಿಗಳ ಸಂಖ್ಯೆ ಕುಸಿಯುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇದೆಯಾದರೂ ಕೊಡಗಿನ ಅಸ್ತಿತ್ವ ಉಳಿಯಬೇಕಾದರೆ ನಾವೀಗ ಎಚ್ಚೆತ್ತುಕೊಳ್ಳಬೇಕಾಗಿದೆ. ಮತ್ತು ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.. ಇಷ್ಟಕ್ಕೂ ಇಲ್ಲಿ ಏನಾಗಿದೆ? ಏನಾಗುತ್ತಿದೆ ಎಂಬುದರ ಕುರಿತಂತೆ ಬೆಳಕು ಚೆಲ್ಲುವ ಲೇಖನವನ್ನು ಕಾಯಪಂಡ ವಿಷ್ಣು ನಾಚಪ್ಪ ಬರೆದಿದ್ದಾರೆ.

ಇದನ್ನೂ ಓದಿ… ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ….
ಕೊಡಗಿನ ಹಬ್ಬ ಹರಿದಿನಗಳು ಮತ್ತು ಮದುವೆ ಸಮಾರಂಭಗಳಿಗೆ ಹೋದಾಗ ಈಗ ಕಾಣುವ ದೃಶ್ಯ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಅಲ್ಲಿ ಬೇರೆಯವರ ಮಕ್ಕಳು ಅಪ್ಪನ ಎರಡೂ ಕೈ ಹಿಡಿದು ಕುಣಿದು ಓಡುತ್ತಿದ್ದಾರೆ. ಆದರೆ ನಮ್ಮ ಕೊಡವ ತಾಯಿಯ ಸೊಂಟದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಈ ಚಿಕ್ಕ ವಿಷಯವೇ ನಮ್ಮ ಮುಂದಿರುವ ದೊಡ್ಡ ಜವಾಬ್ದಾರಿಗೆ ಕನ್ನಡಿ ಹಿಡಿದ ಹಾಗೆ ಇದೆ.

ನಮ್ಮ ಹಿರಿಯರು ದೇವರಕಾಡಿನ ಪರಿಕಲ್ಪನೆಯಲ್ಲಿ ಪಶ್ಚಿಮಘಟ್ಟವನ್ನು ಪ್ರೀತಿಯಿಂದ ಉಳಿಸಿಕೊಂಡು ಬಂದರು. ಬೆವರು ಸುರಿಸಿ ಮನೆ ಕಟ್ಟಿದರು, ಕಾಫಿ ತೋಟ ಬೆಳೆಸಿದರು. ಇವೆಲ್ಲವನ್ನೂ ಮುಂದೆ ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಇವತ್ತು ನಮ್ಮನ್ನು ಕಾಡುತ್ತಿದೆ. ಮದುವೆಗಳು ನಡೆಯುತ್ತಿವೆ. ಆದರೆ ಮಕ್ಕಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಅದೇ ಸಮಯದಲ್ಲಿ ಹಿರಿಯರು ನಮ್ಮನ್ನು ಬಿಟ್ಟು ಹೋಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ… ಕೊಡಗಿನ ಮಣ್ಣಿನ ಮಕ್ಕಳ ಕಣ್ಣೀರು…. ಒಂಟಿಯಾದ ಜೀವಗಳಿಗೆ ಜೊತೆಯಾಗೋಣ…

ಹುಟ್ಟುವವರಿಗಿಂತ ಹೋಗುವವರೇ ಹೆಚ್ಚಾದರೆ ಒಂದು ಸಮಾಜ ಸಹಜವಾಗಿ ಕುಗ್ಗುತ್ತದೆ. ಇದು ಯಾವುದೇ ಭೇದಭಾವದ ಮಾತಲ್ಲ. ಇದು ನಮ್ಮ ಮುಂದಿನ ಪೀಳಿಗೆಯ ಬಗ್ಗೆ ಇರುವ ಕಳಕಳಿ. ನಮ್ಮ ಜನಸಂಖ್ಯೆ ಆರೋಗ್ಯಕರವಾಗಿ ಬೆಳೆದರೆ ಮಾತ್ರ ನಾಳೆ ನಮ್ಮ ಭಾಷೆ, ನಮ್ಮ ಆಚರಣೆ, ನಮ್ಮ ಕಥೆಗಳು ಜೀವಂತವಾಗಿರುತ್ತವೆ.

ಈ ಜನಸಂಖ್ಯೆ ಕಡಿಮೆಯಾಗುವ ನಡುವೆ ಇನ್ನೊಂದು ಆತಂಕವೂ ಇದೆ. ಕಸ್ತೂರಿರಂಗನ್ ವರದಿ ಪ್ರಕಾರ ನಮ್ಮ ಪಶ್ಚಿಮಘಟ್ಟದ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯದ ಚರ್ಚೆಯಲ್ಲಿವೆ. ಒಂದು ವೇಳೆ ನಮ್ಮೂರು ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ನಿಯಮಗಳ ವ್ಯಾಪ್ತಿಗೆ ಬಂದರೆ ಜನಜೀವನ ಇನ್ನಷ್ಟು ಕಷ್ಟವಾಗಬಹುದು.

ಇದನ್ನೂ ಓದಿ… ಕೊಡಗಿನ ಆಸ್ತಿ ಕೊಡಗಿನಲ್ಲೇ ಉಳಿಯಲಿ… ಆಸ್ತಿ ಮಾರಾಟ ಮಾಡುವ ಮುನ್ನ ಯೋಚಿಸಿ!
ನಮ್ಮ ಭೂಮಿಯಲ್ಲಿ ನಾವು ಘನತೆಯಿಂದ ಬದುಕಲು ಅವಕಾಶ ಇರಬೇಕು. ನಮಗೆ ಬದುಕುವ ಹಕ್ಕು ಬೇಕು. ನಮ್ಮ ತೋಟಗಳಲ್ಲಿ ಸಾಮಾನ್ಯ ಕೃಷಿ ಕೆಲಸಗಳಿಗೆ ಅನಗತ್ಯ ಅಡಚಣೆ ಆಗಬಾರದು. 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಕೊಡಗಿನ ಪಶ್ಚಿಮಘಟ್ಟದ ನಿವಾಸಿಗಳ ಬದುಕೂ ಸುಭದ್ರವಾಗಿರಬೇಕು. ಪರಿಸರ ಸಂರಕ್ಷಣೆ ಅತ್ಯಗತ್ಯ. ಅದೇ ರೀತಿ ಅಲ್ಲಿ ಶತಮಾನಗಳಿಂದ ಬದುಕುತ್ತಿರುವ ಜನರ ಬದುಕನ್ನೂ ಉಳಿಸುವ ಸಮತೋಲಿತ ತೀರ್ಮಾನವಾಗಬೇಕು.

ಇದಕ್ಕೆ ಕಾರಣಗಳನ್ನು ಹುಡುಕಿದರೆ ಹಲವು ವಿಷಯಗಳು ಕಾಣುತ್ತವೆ. ವಿದ್ಯೆ ಮತ್ತು ಉದ್ಯೋಗದ ಕಾರಣದಿಂದ ಮದುವೆ ತಡವಾಗುತ್ತಿದೆ. ಆರ್ಥಿಕ ಜವಾಬ್ದಾರಿಯಿಂದ ಒಂದು ಮಗುವನ್ನು ಉತ್ತಮವಾಗಿ ಬೆಳೆಸುವ ಯೋಚನೆ ಬಂದಿದೆ. ಇನ್ನು ಕೆಲವರು ವೈಯಕ್ತಿಕ ಕಾರಣಗಳಿಂದ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಓದಿ ಮುಗಿಸಿದ ನಮ್ಮ ಮಕ್ಕಳು ಬೆಂಗಳೂರು, ವಿದೇಶಗಳಲ್ಲಿ ಅವಕಾಶ ಕಂಡು ಅಲ್ಲೇ ನೆಲೆಸುತ್ತಿದ್ದಾರೆ. ಊರಿಗೆ ವಾಪಸ್ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈ ಎಲ್ಲದರ ಪರಿಣಾಮವಾಗಿ ನಮ್ಮ ಮುಂದಿನ ಪೀಳಿಗೆ ತೆಳ್ಳಗಾಗುತ್ತಿದೆ.

ಇದನ್ನೂಓದಿ … ಕೊಡಗಿಗೆ ಸಾಂಸ್ಕೃತಿಕ ಅಕಾಡೆಮಿ ಬೇಕೇ ಬೇಕು… ಕಲೆ ನಶಿಸಿದರೆ, ಹೃದಯಬಡಿತ ನಿಂತಂತೆ..
ಇದನ್ನು ನೋಡಿ ಸುಮ್ಮನಿರಲು ಆಗುವುದಿಲ್ಲ. ಯಾಕೆಂದರೆ ಮನೆಗೆ ಮುಂದಿನ ಪೀಳಿಗೆ ಇಲ್ಲದೆ ಹೋದರೆ ನಮ್ಮ ಶ್ರಮಕ್ಕೆ ಅರ್ಥ ಇರುವುದಿಲ್ಲ. ಪರಿಸರವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಜವಾಬ್ದಾರಿ ಹೊರುವವರು ನಮ್ಮ ಮಕ್ಕಳೇ ಆಗಬೇಕು. ಆದ್ದರಿಂದ ಇವತ್ತು ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕು. ಮದುವೆ ಮತ್ತು ಕುಟುಂಬವನ್ನು ಪ್ರೋತ್ಸಾಹಿಸಬೇಕು.

ಬೇಗ ಮದುವೆಯಾಗಿ ಕುಟುಂಬ ಕಟ್ಟುವವರಿಗೆ ಸಮಾಜ ಗೌರವ ಕೊಡಬೇಕು. ಮಕ್ಕಳು ಹೊರೆಯಲ್ಲ, ಅವರು ನಮ್ಮ ಆಸ್ತಿ ಮತ್ತು ಭವಿಷ್ಯ ಎನ್ನುವ ಮನಸ್ಥಿತಿ ಮತ್ತೆ ಬರಬೇಕು. ಓದಿದ ಮಕ್ಕಳು ಊರಿಗೆ ವಾಪಸ್ ಬಂದು ಇಲ್ಲೇ ಉದ್ಯೋಗ, ಉದ್ದಿಮೆ ಮಾಡುವ ಹಾಗೆ ಅವಕಾಶ ಸೃಷ್ಟಿಸಬೇಕು. ಪ್ರತಿ ಒಕ್ಕೂಟದಲ್ಲಿ, ಪ್ರತಿ ಕುಟುಂಬದಲ್ಲಿ, ಪ್ರತಿ ಊರಿನಲ್ಲಿ, ಪ್ರತಿ ನಾಡಿನಲ್ಲಿ ಈ ವಿಷಯ ಪ್ರೀತಿಯಿಂದ ಮಾತಾಡಬೇಕು.

ಕೊಡಗಿನ ಹಾಕಿಯಿಂದ ನಾಟಿ ಓಟದವರೆಗೆ… ಹಳ್ಳಿ ಆಟಕ್ಕೆ ವೇದಿಕೆ ಬೇಕಾಗಿದೆ… 
ಪರಿಸರವೂ ಉಳಿಯಬೇಕು, ನಮ್ಮ ಜನಾಂಗವೂ ಉಳಿಯಬೇಕು, ನಮ್ಮ ಸ್ವಾತಂತ್ರ್ಯವೂ ಉಳಿಯಬೇಕು. ನಾವು ಇವತ್ತು ಎಚ್ಚೆತ್ತುಕೊಂಡು ಒಟ್ಟಾಗಿ ಕೆಲಸ ಮಾಡಿದರೆ ನಾಳೆ ನಮ್ಮ ಕಥೆಯನ್ನು ನಾವೇ ಬರೆಯಬಹುದು. ನಮ್ಮ ನಾಳೆ ನಮ್ಮ ಕೈಯಲ್ಲಿದೆ. ಅದನ್ನು ಕಟ್ಟುವ ಕೆಲಸ ಇಂದಿನಿಂದಲೇ ಶುರು ಆಗಲಿ.

ಕಾವೇರಿ ತವರು ಕೊಡಗಿನ ರೈತರಿಗೆ ಮೊದಲು ನ್ಯಾಯ ಕೊಡಿ…ಇಲ್ಲಿನ ಸಮಸ್ಯೆ ಆಲಿಸಿ..!

admin
the authoradmin

Leave a Reply