LatestSports

ಕ್ರಾಸ್ ಕಂಟ್ರಿ ಸ್ಕೀಯಿಂಗ್ ನಲ್ಲಿ ನ್ಯೂಜಿಲ್ಯಾಂಡ್ ನೆಲದಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ತೆಕ್ಕಡ ಭವಾನಿ….

ನ್ಯೂಜಿಲ್ಯಾಂಡ್ ನೆಲದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ

ಈಗಾಗಲೇ ಸ್ಕೀಯಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಿರುವ ಕೊಡಗಿನ ತೆಕ್ಕಡ ಭವಾನಿ ಅವರು ಇದೀಗ ನ್ಯೂಜಿಲ್ಯಾಂಡ್ ನ ಸ್ನೋ ಫಾರ್ಮ್ ನಲ್ಲಿರುವ ಮೆರಿನೊ ಮಸ್ಟರ್ ನಲ್ಲಿ ಆಗಸ್ಟ್ 22ರಂದು ನಡೆದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಸ್ಪರ್ಧೆಯ  ಮಹಿಳೆಯರ 30 ವರ್ಷದ  ವಿಭಾಗದಲ್ಲಿ 21 ಕಿಮೀ ಅಂತರವನ್ನು  1:34:38 ಅವಧಿಯಲ್ಲಿ  ಪೂರ್ಣಗೊಳಿಸಿ ಗೆಲುವು ಸಾಧಿಸಿದ್ದು ಆ ಮೂಲಕ ಭಾರತದ ಪತಾಕೆಯನ್ನು ನ್ಯೂಜಿಲ್ಯಾಂಡ್ ನೆಲದಲ್ಲಿ ಹಾರಿಸಿದ ಮೊದಲ ಭಾರತೀಯ ಮಹಿಳೆಯಾಗಿ ಹೊರ ಹೊಮ್ಮಿದ್ದಾರೆ.

ಈ ಗೆಲುವು ಅವರ ಭಾರತೀಯ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ ಎನ್ನುವುದು ಹೆಮ್ಮೆ ತರುವ ಸಂಗತಿಯಾಗಿದೆ. ಅಷ್ಟೇ ಅಲ್ಲದೆ  ಅಧಿಕೃತ ವರ್ಲ್ಡ್ಲೋಪೆಟ್ ( Worldloppet) ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಿಲಯನ್ಸ್ ಫೌಂಡೇಶನ್ ಮತ್ತು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ  ಭಾರತವನ್ನು ಪ್ರತಿನಿಧಿಸುತ್ತಾ ಬಂದಿರುವ ಭವಾನಿ ಅವರು  ಪ್ರಸ್ತುತ  ನ್ಯೂಜಿಲ್ಯಾಂಡ್ ನ ಸ್ನೋ ಫಾರ್ಮ್ ನಲ್ಲಿ ನೆಲೆಸಿದ್ದು ಅಲ್ಲಿ ಅಂತರರಾಷ್ಟ್ರೀಯ ಮಟ್ಟದ   ತರಬೇತಿಯನ್ನು ಪಡೆಯುತ್ತಾ ಮುಂಬರುವ ಸೀಸನ್ ನ ಸ್ಪರ್ಧೆಗಳಿಗಾಗಿ ತಯಾರಿ ನಡೆಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ನೆರವಿನಲ್ಲಿ ಸಾಧನೆ…

ಕರ್ನಾಟಕ ಸರ್ಕಾರವು ತನ್ನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ₹ 10 ಲಕ್ಷ ಆರ್ಥಿಕ ನೆರವನ್ನು ನೀಡಿದ್ದು,  ಇದನ್ನು ಭವಾನಿ ಅವರು ನ್ಯೂಜಿಲ್ಯಾಂಡ್ ನಲ್ಲಿ ತಮ್ಮ ಅಂತಾರಾಷ್ಟ್ರೀಯ ತರಬೇತಿಗೆ ಬಳಸಿಕೊಂಡಿರುವುದು ವಿಶೇಷವಾಗಿದೆ. ಈಗಾಗಲೇ ಇಲ್ಲಿನ ಮೆರಿನೊ ಮಸ್ಟರ್ ನಲ್ಲಿ  ಕ್ರಾಸ್ ಕಂಟ್ರಿ ಸ್ಕೀಯಿಂಗ್ ಬೇಕಾದ ಕೌಶಲತೆ ಮತ್ತು ಕಠಿಣ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಇದೀಗ ನಡೆದಿರುವ ಸ್ಪರ್ಧೆ ಮೆರಿನೊ ಮಸ್ಟರ್ ನ್ಯೂಜಿಲೆಂಡ್  ಸ್ಥಾಪಿತ ದೂರದ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಸ್ಪರ್ಧೆಗಳಲ್ಲಿ ಒಂದಾಗಿದೆ ಮತ್ತು ವರ್ಲ್ಡ್ಲೋಪೆಟ್ ಸ್ಕೀ ಫೆಡರೇಶನ್ ಸರ್ಕ್ಯೂಟ್ ನ ಭಾಗವಾಗಿದೆ. ಈ ಸ್ಪರ್ಧೆಯು ದೂರದ ಓಟದ ವಿವಿಧ ವಿಭಾಗಗಳನ್ನು ಹೊಂದಿದ್ದು  42 ಕಿ.ಮೀ ಕ್ರಾಸ್ ಕಂಟ್ರಿ  ಸ್ಕೀಯಿಂಗ್ ಮುಖ್ಯ ಮೆರಿನೊ ಮಸ್ಟರ್  ಆಗಿದೆ.

ಭವಾನಿ ಅವರಿಗೆ  21 ಕಿ. ಮೀ. ಕ್ರಾಸ್ ಕಂಟ್ರಿ ಸ್ಕೀಯಿಂಗ್ ಅಂತಾರಾಷ್ಟ್ರೀಯ ಕ್ರಾಸ್-ಕಂಟ್ರಿ ಸ್ಕೀಯಿಂಗ್ ನಲ್ಲಿ  ದೂರದ ಮತ್ತು ಸ್ಕೀ-ಮ್ಯಾರಥಾನ್ ನಲ್ಲಿ  ಒಂದು ಪ್ರಮುಖ ಹೆಜ್ಜೆಯಾಗಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ.  ಎಫ್. ಐ. ಎಸ್. ವೇದಿಕೆಯಿಂದ ವರ್ಲ್ಡ್ಲೋಪೆಟ್ ವರೆಗೆ ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಇದು ಮಹತ್ವದ್ದು ಎಂದರೆ ತಪ್ಪಾಗಲಾರದು.

ಪದಕ ಗೆದ್ದ ಮೊದಲ ಭಾರತೀಯ ಮಹಿಳೆ

2025-26ರ ಅವಧಿಯಲ್ಲಿ, ಅವರು ಅಂತರರಾಷ್ಟ್ರೀಯ ಎಫ್ಐಎಸ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ, ಇದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವರ ಸಾಧನೆಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಎಫ್ಐಎಸ್ ಕ್ರಾಸ್-ಕಂಟ್ರಿ ಸ್ಕೀ ವಿಶ್ವಕಪ್ ಗೆ ಅರ್ಹತೆ ಪಡೆದ ಮತ್ತು ಸ್ಪರ್ಧಿಸಿದ ಮೊದಲ ಭಾರತೀಯ ಕ್ರಾಸ್-ಕಂಟ್ರಿ ಸ್ಕೀಯರ್ ಎಂಬ ಹೆಗ್ಗಳಿಕೆಯೂ ಅವರ ಮುಡಿಗೇರಿದೆ. ಜತೆಗೆ ಸ್ಪ್ರಿಂಟ್ ಮತ್ತು ದೂರದ ಎಫ್.ಐ.ಎಸ್. ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಇನ್ನಷ್ಟು  ಅನುಭವವನ್ನು ಪಡೆಯಲು ವರ್ಲ್ಡ್ಲೋಪೆಟ್ ಸರ್ಕ್ಯೂಟ್ ಮೂಲಕ  ಕ್ರಾಸ್ ಕಂಟ್ರಿಯಲ್ಲಿ ಇನ್ನಷ್ಟು   ದೂರದ ಕ್ರಾಸ್-ಕಂಟ್ರಿ ಸ್ಕೀಯಿಂಗ್ ನ ವಿಸ್ತರಣೆಗೂ ಅನುಕೂಲ ಮಾಡಿಕೊಟ್ಟಿದೆ.

ಈಗಾಗಲೇ ಸ್ಕೀಯಿಂಗ್ ನಲ್ಲಿ ಹತ್ತು ಹಲವು ಸಾಧನೆಗಳನ್ನು ಮಾಡಿರುವ ಕೊಡಗಿನ ನಾಪೋಕ್ಲು ಬಳಿಯ ಪೆರೂರು ತೆಕ್ಕಡ ನಂಜುಂಡ ಮತ್ತು ಪಾರ್ವತಿ ದಂಪತಿ  ಪುತ್ರಿಯಾಗಿರುವ ತೆಕ್ಕಡ ಭವಾನಿ ಅವರು ಹೆಚ್ಚಿನ ತರಬೇತಿಯನ್ನು ಪ್ರಸ್ತುತ  ನ್ಯೂಜಿಲೆಂಡ್ ಸ್ನೋ ಫಾರ್ಮ್ ನಲ್ಲಿ ಪಡೆಯುತ್ತಿದ್ದು, ಕ್ಲಾಸಿಕ್ ಮತ್ತು ಫ್ರೀಸ್ಟೈಲ್ ಕ್ರಾಸ್-ಕಂಟ್ರಿ ಸ್ಕೀಯಿಂಗ್ ಎರಡರಲ್ಲೂ ಸಹಿಷ್ಣುತೆ, ಓಟದ ಫಿಟ್ನೆಸ್ ಮತ್ತು ತಾಂತ್ರಿಕ ಕೌಶಲತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದು  ಅಂತರರಾಷ್ಟ್ರೀಯ ಮಟ್ಟದ ಸ್ಕೀಯಿಂಗ್ ಸೀಸನ್ ಗೆ ತಯಾರಿಯೂ ಆಗಿದೆ.

ಮೆರಿನೊ ಮಸ್ಟರ್ ಫಲಿತಾಂಶವು ತೆಕ್ಕಡ ಭವಾನಿ ಅವರ ವೃತ್ತಿಜೀವನಕ್ಕೆ ಮತ್ತೊಂದು ಅಂತಾರಾಷ್ಟ್ರೀಯ ಮಟ್ಟದ ಮೈಲಿಗಲ್ಲಾಗಿದೆ. ಎಫ್.ಐ.ಎಸ್. ಕ್ರಾಸ್-ಕಂಟ್ರಿ ಸ್ಕೀ ವಿಶ್ವಕಪ್ ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಕ್ರಾಸ್-ಕಂಟ್ರಿ ಸ್ಕೀಯರ್ ಆಗುವುದರಿಂದ ಹಿಡಿದು, ಅಂತರರಾಷ್ಟ್ರೀಯ ಎಫ್.ಐ.ಎಸ್. ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗುವವರೆಗೆ, ಮತ್ತು ಈಗ ಅಧಿಕೃತ ವರ್ಲ್ಡ್ಲೋಪೆಟ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆಯಾಗುವವರೆಗೆ ಹತ್ತು ಹಲವು ದಾಖಲೆಗಳು  ಇವರ ಮುಡಿಗೇರಿದೆ.

ಸಾಧಕಿ ತೆಕ್ಕಡ ಭವಾನಿ ಹೇಳುವುದೇನು?

ಇನ್ನು ನ್ಯೂಜಿಲ್ಯಾಂಡ್ ನ ಸ್ನೋ ಫಾರ್ಮ್ ನಲ್ಲಿರುವ ಮೆರಿನೊ ಮಸ್ಟರ್ ನಲ್ಲಿ ನಡೆದ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಬಗ್ಗೆ ಸಂತಸ ಹಂಚಿಕೊಂಡಿರುವ ತೆಕ್ಕಡೆ ಭವಾನಿ ಅವರು  ನನ್ನ ತರಬೇತಿಯ ಉದ್ದಕ್ಕೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು ಪ್ರೋತ್ಸಾಹಿಸಿದ್ದಕ್ಕಾಗಿ ನಾನು ಸ್ನೋ ಫಾರ್ಮ್ ನ್ಯೂಜಿಲೆಂಡ್ ಗೆ ತುಂಬಾ ಕೃತಜ್ಞಳಾಗಿದ್ದೇನೆ. ಇಲ್ಲಿ ತರಬೇತಿ ಪಡೆಯುವ ಮತ್ತು ಮೆರಿನೊ ಮಸ್ಟರ್ ನಂತಹ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸುವ ಅವಕಾಶವು ಕ್ರೀಡಾಪಟುವಾಗಿ ನನ್ನ ಮುಂದಿನ  ಸಾಧನೆಗೆ ದಾರಿದೀಪವಾಗಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರ ಮತ್ತು ರಿಲಯನ್ಸ್ ಫೌಂಡೇಶನ್ ನ ಬೆಂಬಲವು ನನ್ನ ಅಂತಾರಾಷ್ಟ್ರೀಯ ತರಬೇತಿ ಮತ್ತು ಸ್ಪರ್ಧೆಯಲ್ಲಿ  ಭಾಗವಹಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ಕ್ರಾಸ್-ಕಂಟ್ರಿ ಸ್ಕೀಯಿಂಗ್ ನಲ್ಲಿ ಭಾರತದ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಹಾರಿಸುವುದನ್ನು ಮುಂದುವರೆಸುವುದಾಗಿ ಹೇಳಿರುವ ಅವರು ಕರ್ನಾಟಕ ಸರ್ಕಾರ ಮತ್ತು ರಿಲಯನ್ಸ್ ಫೌಂಡೇಶನ್ ನ ಬೆಂಬಲದೊಂದಿಗೆ, ಅಂತರರಾಷ್ಟ್ರೀಯ ವೃತ್ತಿಜೀವನವನ್ನು ನಿರ್ಮಿಸುವತ್ತ ಗಮನ ಹರಿಸಿದ್ದಾಗಿ ಹೇಳಿರುವುದಲ್ಲದೆ, ಮುಂದಿನ  2030ರ ಚಳಿಗಾಲದ ಒಲಿಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ತಮ್ಮ ದೀರ್ಘಕಾಲದ ಕನಸನ್ನು ನನಸು ಮಾಡುವ ತಯಾರಿಯಲ್ಲಿರುವುದಾಗಿ ತಿಳಿಸಿದ್ದಾರೆ.

ಇದು ನನ್ನ ಮೊದಲ ವರ್ಲ್ಡ್ ಲೋಪೆಟ್ ರೇಸ್ ಆಗಿತ್ತು, ಆದ್ದರಿಂದ 21 ಕಿ. ಮೀ. ಸ್ಪರ್ಧೆಯಲ್ಲಿ ನನ್ನ ವಿಭಾಗವನ್ನು ಗೆಲ್ಲುವುದು ನನಗೆ ಬಹಳ ಅಗತ್ಯವಾಗಿತ್ತು. ನಾನು ಪ್ರಾಥಮಿಕ ತರಬೇತಿಗಾಗಿ ನ್ಯೂಜಿಲೆಂಡ್ ನಲ್ಲಿದ್ದೇನೆ ಮತ್ತು ಕ್ರಾಸ್ ಕಂಟ್ರಿಯಲ್ಲಿ ನನ್ನನ್ನು ನಾನು ಪರೀಕ್ಷಿಸಿಕೊಳ್ಳಲು ಈ ಅವಕಾಶ ಸಹಕಾರಿಯಾಗಿದೆ ಅಲ್ಲದೆ ಈ ಗೆಲುವು  ಆತ್ಮವಿಶ್ವಾಸವನ್ನು ಹೆಚ್ಚಿಸಿರುವುದಾಗಿ ಹೇಳಿದ್ದಾರೆ.

-B M Lavakumar

ಇದನ್ನೂ ಓದಿ… ಕೊಡಗಿನ ಭವಾನಿ… ಯಾರಿವರು? ಏನಿವರ ಸಾಧನೆ?

admin
the authoradmin

Leave a Reply