ArticlesLatest

ಆಳುವ ವರ್ಗದ ಕೆಟ್ಟ ನಡೆಯನ್ನು ಕೆಬಿಜಿ ಸಹಿಸುತ್ತಲೂ ಇರಲಿಲ್ಲ, ಹೆದರುತ್ತಲೂ ಇರಲಿಲ್ಲ.

ಆ ದಿನಗಳ ಮೆಲುಕು..3

ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್  ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ ಒಂದೂ ವರ್ಷವಾಯಿತು. ಇದರ ನಿಮಿತ್ತ ಅಂದು  ಲೇಖಕ ಎಸ್.ಪ್ರಕಾಶ್ ಬಾಬು  ಅವರು  ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ….

1978ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದ ಜಯದೇವರಾಜ ಅರಸು ಅವರಿಗೆ ಮೈಸೂರನ್ನು ಆಧುನಿಕವಾಗಿ ಅಭಿವೃದ್ಧಿಸುವ ದೂರದೃಷ್ಟಿ ಇತ್ತು. ಮೈಸೂರು ಪ್ರವಾಸಿ ತಾಣಕ್ಕೆ ಸೂಕ್ತವಾದ ನಗರ ಅಂತ ಚಾಮುಂಡಿ ಬೆಟ್ಟದ ಸುತ್ತಾ ಬನ್ನೇರುಘಟ್ಟ ಮಾದರಿಯ ಸಫಾರಿ ಮತ್ತು ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯ ‘ನೆಹರು ಲೋಕ’ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರು. ಅಷ್ಟರಲ್ಲಿ ದೇವರಾಜ ಅರಸು ಮುಖ್ಯಮಂತ್ರಿ ಪದವಿ ಕಳೆದುಕೊಂಡರೆ, 1983ರಲ್ಲಿ ರಾಜಕೀಯ ಕುಯುಕ್ತಿಯಿಂದ ಜಯದೇವರಾಜ ಅರಸು ಚುನಾವಣೆಯಲ್ಲಿ ಸೋತು ಹೋದರು. ಆದರೆ ಅವರ ಅಭಿವೃದ್ಧಿ ಕನಸನ್ನು ನನಸಲು ಮಾಡಲು ಟೊಂಕಕಟ್ಟಿ ನಿಂತವರು ಕೆಬಿಜಿ.

ನಾನು ಪ್ರತ್ಯಕ್ಷವಾಗಿ ಕಂಡಂತೆ 1990ರಿಂದ 1992ರವರೆಗೆ ಬಂಗಾರಪ್ಪ ಮಂತ್ರಿ ಮಂಡಲದಲ್ಲಿ ಸಾರಿಗೆ ಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಅಝೀಝ್ ಸೇಟ್ ಅವರನ್ನು ಬೆಂಬತ್ತಿದ್ದರು. ಅಝೀಝ್ ಸೇಟ್ ವಿರುದ್ಧ ವಕ್ಫ್ ಸಮಿತಿಯ ಹಿರಿಯ ಮೌಲ್ವಿ ಒಬ್ಬರು ಪತ್ರಿಕಾಗೋಷ್ಟಿ ವರದಿಯನ್ನು ನಾನು ಬರೆದಿದ್ದೆ. ಇದು ಪ್ರಿಂಟೂ ಆಗುತ್ತಿತ್ತು. ಮೊದಲ ಕಾಪಿ ಮೇಲೆ ಕಣ್ಣಾಡಿಸಿದ ಸುದ್ದಿ ಸಂಪಾದಕ ಎಂ.ಆರ್.ಶಿವಣ್ಣ ಪ್ರಿಂಟಿಂಗ್ ತಡೆ ಹಿಡಿದು, ಅಝೀಝ್ ಸೇಟ್‌ಗೆ ಇರಿಸು ಮುರಿಸಾಗುವ ಕೊನೆಯ ನಾಲ್ಕೈದು ಸಾಲನ್ನು ಆಫ್‌ಸೆಟ್ ಮುದ್ರಣದ ಪ್ಲೇಟ್‌ನಲ್ಲೇ ಕೆರೆದು ಅಳಿಸಿದ್ದರು.

ಇದರಿಂದ ಪತ್ರಿಕೆಯ ಮುದ್ರಣದಲ್ಲಿ ಆ ಭಾಗ ಖಾಲಿ ಬಿದ್ದಿತ್ತು. ಹೀಗೇ ಸಚಿವ ಅಝೀಝ್ ಸೇಟ್ ಪರವಾಗಿ ಕೆ.ಬಿ.ಜಿ ನಿರಂತರವಾಗಿ ಬೆಂಬಲಿಸಿದರು. ಆದರೆ ಚಾಮುಂಡಿ ಬೆಟ್ಟದ ತಪ್ಪಲನ್ನು ಅನ್ಯಾಕ್ರಮಣದಿಂದ ತಡೆಯಲು ಸಾಧ್ಯವಾಗದಿದ್ದಾಗ ತುಂಬಾ ವ್ಯಾಕುಲಗೊಂಡಿದ್ದನ್ನ ನಾನು ಕಣ್ಣಾರೆ ಕಂಡಿದ್ದೆ.

ಮತ್ತೊಂದು ಘಟನೆ ಉದಾಹರಿಸುವುದಾದರೆ ಅದು ಮಕ್ಕಾಜಿ ಚೌಕದ ವಾಣಿಜ್ಯ ಸಂಕೀರ್ಣದ ಹಗರಣ. ಮೈಸೂರಿನ ಹೃದಯ ಭಾಗದಲ್ಲಿರುವ ಮಕ್ಕಾಜಿ ಚೌಕದ ಜಾಗದ ಮೇಲೆ ರಣಹದ್ದುಗಳ ಕಣ್ಣು ಬಿದ್ದಿದೆ ಅಂತ 1991ರಲ್ಲಿ “ಮಕ್ಕಾಜಿ ಚೌಕದ ಮೇಲೆ ರಣಹದ್ದುಗಳ ಹಾರಾಟ” ಅಂತ ಮುಖಪುಟದ ತಲೆ ಬರಹದಲ್ಲೇ ದೊಡ್ಡ ಅಕ್ಷರಗಳಲ್ಲೇ ಬರೆದು ತಮ್ಮ ಹೆಸರಿನಲ್ಲೇ ಪ್ರಕಟಿಸಿದ್ದರು. ಇದರಿಂದ ಕೆರಳಿದ ಅಂದಿನ ನಗರಪಾಲಿಕೆ ಸದಸ್ಯರು ಮಾಸಿಕ ಸಭೆಯಲ್ಲಿ ಪ್ರಸ್ತಾಪಿಸಿ “ನಗರಪಾಲಿಕೆ ಸದಸ್ಯರನ್ನು ರಣಹದ್ದುಗಳಿಗೆ ಹೋಲಿಸಿರುವ ಕೆ.ಬಿ.ಗಣಪತಿಯನ್ನು ಸಭೆಗೆ ಕರೆಸಿ ಛೀಮಾರಿ ಹಾಕಬೇಕು” ಎಂದು ಆಗ್ರಹಿಸಿದ್ದರು.

ಇದಕ್ಕೆಲ್ಲ ಕೆಬಿಜಿ ಹೆದರದೆ ಮತ್ತಷ್ಟು ಖಾರವಾಗಿ ಮರುದಿನದ ಸಂಪಾದಕೀಯದಲ್ಲಿ ಬರೆದು ಬಾಯಿ ಮುಚ್ಚಿಸಿದ್ದರು. ಹೀಗೇ  ಆಳುವ ವರ್ಗದ ಕೆಟ್ಟ ನಡೆಯನ್ನು ಅವರು ಸಹಿಸುತ್ತಲೂ ಇರಲಿಲ್ಲ, ಹೆದರುತ್ತಲೂ ಇರಲಿಲ್ಲ. ಪ್ರಸ್ತುತ ಮಕ್ಕಾಜಿ ಚೌಕದ ದುಸ್ಥಿತಿ ನೋಡಿದರೆ, 34ವರ್ಷಗಳ ಹಿಂದೆಯೇ ಕೆ.ಬಿ.ಗಣಪತಿ ಅದೇಕಷ್ಟು ಆವೇಶಭರಿತರಾಗಿ ಲೇಖನ ಬರೆದಿದ್ದರೆಂಬುದು ಮನದಟ್ಟಾಗುತ್ತದೆ.

ಕಷ್ಟಕಾಲವನ್ನು ಮರೆಯುತ್ತಿರಲಿಲ್ಲ…

ಯಶಸ್ವಿ ಉದ್ಯಮಿಗಳಾರೂ ತಾವು ನಡೆದು ಬಂದ ಕಷ್ಟದ ಹಾದಿಯನ್ನು ಮರೆಯುವುದಿಲ್ಲ. ಇದಕ್ಕೆ ಕೆಬಿಜಿ ಯಾವತ್ತೂ ಅಪವಾದವಾಗಿರಲಿಲ್ಲ. ಹಾಗೇ ನೆರವಿತ್ತವರನ್ನು ಅವರು ಎಂದಿಗೂ ಮರೆಯುತ್ತಿರಲಿಲ್ಲ. 1987ರಲ್ಲಿ ಸರಸ್ವತಿಪುರಂನಿಂದ ಈಗಿನ ಬನ್ನಿಮಂಟಪದ ಕೈಗಾರಿಕಾ ಪ್ರದೇಶಕ್ಕೆ ಕಾರ್ಯಾಲಯ ಸ್ಥಳಾಂತರಿಸಿದಾಗ ಆಫ್‌ಸೆಟ್ ಮುದ್ರಣದ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರು. ಹೀಗಿದ್ದರೂ, 1978ರಲ್ಲಿ ಖರೀದಿಸಿದ್ದ ಹಳೆ ಕಾಲದ ಮುದ್ರಣ ಯಂತ್ರವನ್ನು ಮಾರದೆ ನೆನಪಿಗಾಗಿ ಇಟ್ಟುಕೊಂಡಿದ್ದರು. ಹಾಗೇ, 1980ರಲ್ಲಿ ಖರೀದಿಸಿದ್ದ ಕಾಫಿ ಕಲರ್‌ನ ದೊಡ್ಡ ಚಕ್ರದ ಲೂನಾವನ್ನೂ ಕಾಪಿಟ್ಟುಕೊಂಡಿದ್ದರು. ವರದಿಗಾರರಿಗೆಂದು ಮತ್ತೊಂದು ಸಣ್ಣ ಚಕ್ರದ ಲೂನಾ ಹೊಸದಾಗಿ ಖರೀದಿಸಿದ್ದರೂ, ಅದನ್ನೂ ಚಾಲ್ತಿಯಲ್ಲಿಟ್ಟಿದ್ದರು.

ಒಮ್ಮೆ ನನಗೆ ಹೊಸ ಲೂನಾ ಸಿಗದೆ, ಹಳೆ ಲೂನಾ ತೆಗೆದುಕೊಂಡು ಹೋಗಿದ್ದೆ. ಅದೂ ಹೈವೇ ಸರ್ಕಲ್‌ನ ಅಪ್ ಸಹ ಹತ್ತದೆ ತಳ್ಳಿಕೊಂಡು ಹೋಗುವಂತಾಗಿತ್ತು. ಇದರಿಂದ ಬೇಸರಿಸಿದ ನಾನು ‘ಇನ್ನು ಮುಂದೆ ಹಳೆ ಲೂನಾ ಓಡಿಸಲ್ಲ’ ಅಂತ ನಾನು ಅನುಭವಿಸಿದ ಕಷ್ಟ ಹೇಳಿದಾಗ ಕೆಬಿಜಿ ಸ್ವಲ್ಪ ಗರಂ ಆದರು. “ಈ ಲೂನಾದಲ್ಲಿ ನಾನು, ಹೆಂಡ್ತಿ ಇಬ್ಬರು ಮಕ್ಕಳು ಕೂರಿಸಿಕೊಂಡು ಓಡಾಡ್ತಿದ್ದೆ. ಅದನ್ನು ಕಂಡಂ ಮಾಡ್ತೀಯಾ” ಅಂತ ಕೋಪ ಮಾಡಿಕೊಂಡಿದ್ದರು. ಇದರಿಂದಲೇ ಗೊತ್ತಾಗುತ್ತೆ ಕೆಬಿಜಿ ವ್ಯಕ್ತಿತ್ವ ಎಂಥದ್ದು ಅನ್ನೋದು. ಕಷ್ಟಕಾಲದಲ್ಲಿ ತಮ್ಮನ್ನು ಸಲಹಿದ ನಿರ್ಜೀವ ವಸ್ತುವನ್ನೇ ಅವರು ನಿಷ್ಪ್ರಯೋಜಕ ಅಂತ ಕಡೆಗಣಿಸುತ್ತಿರಲಿಲ್ಲ.

ಇನ್ನೂ ಅವರೊಂದಿಗೆ ದುಡಿದವರನ್ನು ಮರೆಯುತ್ತಾರೆಯೇ? ಹೀಗಾಗಿ ಚಿಕ್ಕ ಹುಡುಗರಾಗಿದ್ದಾಗಿನಿಂದ ತಮ್ಮಲ್ಲಿ ದುಡಿದ ಗೋಪಿನಾಥ್ ಮತ್ತು ನಾಗೇಶ್ ಅವರನ್ನು ಪ್ರಸರಣಾಧಿಕಾರಿಗಳನ್ನಾಗಿ ನೇಮಿಸಿಕೊಂಡಿದ್ದರು.

ಕೆ.ಬಿ.ಗಣಪತಿ ಅವರು ಸುಖಾಸುಮ್ಮನೆ ಬೃಹತ್ ಸಂಸ್ಥೆ ಬೆಳೆಸಲಿಲ್ಲ. ಅವರಲ್ಲಿದ್ದ ವೃತ್ತಿ ಬದ್ದತೆ ಸಂಸ್ಥೆಯನ್ನು ಬೆಳೆಸಲು ಸಹಾಯಕವಾಯಿತೆನ್ನಬಹುದು. ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು ಎಂಬುದಕ್ಕೆ ಒಂದು ನಿದರ್ಶನ ಹೇಳುವುದಾದರೆ, 1991ರಲ್ಲಿ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಶರತ್ ಕಾರ್ಯಪ್ಪ ಆತ್ಮಹತ್ಯೆ ಪ್ರಕರಣವನ್ನೇ ಉದಾಹರಿಸಬಹುದು. ಪುಂಡು ವಿದ್ಯಾರ್ಥಿಗಳ ರ‍್ಯಾಗಿಂಗ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಶರತ್ ಕಾರ್ಯಪ್ಪ ಸಾವಿಗೆ ಕಾರಣ ಹುಡುಕಿಕೊಂಡು ತನಿಖಾ ವರದಿ ತಯಾರಿಸಿ “ಮೈಸೂರು ಮಿತ್ರ” ಪತ್ರಿಕೆಯಲ್ಲಿ ಪ್ರಕಟಿಸಿದ್ದೆ.

ಅದರಲ್ಲಿ ಆರೋಪಿ ಒಬ್ಬನ ಮನೆಗೇ ಹೋಗಿ ಸಂದರ್ಶನ ಮಾಡಿ ಬರೆದಿದ್ದೆ. ಆದರೆ, ಇದು ತಾನು ನಿರಾಪರಾಧಿ ಎಂಬುದಕ್ಕೆ ನ್ಯಾಯಾಲಯದಲ್ಲಿ ತೊಡಕಾಗುತ್ತೆ, ‘ನಾನು ಹೇಳಿದ್ದಲ್ಲ’ ಅಂತ ಸ್ಪಷ್ಟೀಕರಣ ಹಾಕಿ ಎಂದು ಕಚೇರಿಗೇ ಬಂದು ಕೆ.ಬಿ.ಗಣಪತಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದ. ತಾವು ಕೊಡವರಾಗಿದ್ದರಿಂದ ತನ್ನ ಪರವಾಗಿ ಸಹಾನುಭೂತಿ ತೋರಿಸುತ್ತಾರೆಂಬ ವಿಶ್ವಾಸ ಆರೋಪಿ ಹುಡುಗನ ತಾಯಿಗಿತ್ತು. ಆದರೆ, ಕೆಬಿಜಿ ಎಂಥ ಪರ್ಫೆಕ್ಟ್ ಎಡಿಟರ್ ಅಂದ್ರೆ, ನನ್ನ ಕರೆದು ಏನೂ ಅಂತಾನೂ ಅವರೆದುರು ವಿಚಾರಿಸದೆ, ಅವರನ್ನು ಬೈದು ಕಳುಹಿಸಿದ್ದರು. ಅವರ ಸಿಟ್ಟಿನಲ್ಲಿ ಅನ್ಯಾಯವಾಗಿ ಮೃತನಾದ ಶರತ್ ಕಾರ್ಯಪ್ಪನ ಮುಗ್ದ ಮುಖವೇ ಕಾಣುತ್ತಿತ್ತು ಅನ್ನಿಸುತ್ತೆ. ಇಂಥ ಎಷ್ಟೋ ಪ್ರಸಂಗಗಳು ನಡೆದರೂ, ನನ್ನನ್ನು ಒಮ್ಮೆಯೂ ಹೀಗೇಕೆ ಬರೆದೆ ಅಂತ ಒಮ್ಮೆಯೂ ಕೇಳಲಿಲ್ಲ. ನಾನು ಬರೆದದ್ದರ ವಿರುದ್ಧ ದೂರು ಹೇಳಿದವರ ಮೇಲೆಯೇ ದಬಾಯಿಸಿ ಕಳುಹಿಸಿಬಿಡುತ್ತಿದ್ದರು.

ಪತ್ರಿಕಾ ನೀತಿಜ್ಞ ಕಲ್ಯಾಟಂಡ.ಬಿ.ಗಣಪತಿ ಅವರಿಗೆ ಬರಹ ಗೊತ್ತಿತ್ತು- ವ್ಯವಹಾರ ಗೊತ್ತಿರಲಿಲ್ಲ

admin
the authoradmin

Leave a Reply