LatestNews

ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯ ಬೆಳೆಸಿಕೊಳ್ಳಬೇಕು : ಶಾಸಕ ಮಂತರ್ ಗೌಡ

ಪಾಲಿಟೆಕ್ನಿಕ್ ಕಾಲೇಜು ಹೆಚ್ಚುವರಿ ಕಟ್ಟಡ ಕಾವೇರಿ ಬ್ಲಾಕ್ ಲೋಕಾರ್ಪಣೆ

ಕುಶಾಲನಗರ (ಆರ್ ಹೆಚ್) : ದೇಶದ ಅಭಿವೃದ್ಧಿಯಲ್ಲಿ ತಾಂತ್ರಿಕತೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ತಾಂತ್ರಿಕ ಕೌಶಲ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಲೇಜಿನ ಹೆಚ್ಚುವರಿ ಕಟ್ಟಡ ನೂತನ ಕಾವೇರಿ ಬ್ಲಾಕ್ ಹಾಗೂ ಕಾಲೇಜು ಕ್ಯಾಂಟನ್  ಉದ್ಘಾಟಿಸಿ ಅವರು ಮಾತನಾಡಿದರು.

ದಿ.ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದ ಅವದಿಯಲ್ಲಿ ಕೂಡ್ಲೂರು ಗ್ರಾಮದ ಬಳಿ ಸುಮಾರು ಐದು ನೂರು ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಆರಂಭಿಸಿದರು. ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ದೂರದ ನಗರ ಪ್ರದೇಶಗಳಿಗೆ ಹೋಗುವ ಬದಲು ಮನೆಬಾಗಿಲಿನಲ್ಲಿಯೇ ಇರುವ ಕೈಗಾರಿಕೆಗಳಲ್ಲಿ ಉದ್ಯೋಗ ಕಂಡುಕೊಳ್ಳಬೇಕು ಎಂದರು.ಇದಕ್ಕಾಗಿ ಕೈಗಾರಿಕಾ ಬಡಾವಣೆಯಲ್ಲಿ ಪ್ರತ್ಯೇಕವಾಗಿ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಶಿಕ್ಷಣದಿಂದ ಮಾತ್ರ ಬದುಕು ಹಸನಾಗಿಸಿಕೊಳ್ಳಲು ಸಾಧ್ಯವಾಗಿದ್ದು,ಸರ್ಕಾರಿ ಉದ್ಯೋಗ ಹಾಗೂ ಸಂಬಳಕ್ಕೆ ಪ್ರಾಮುಖ್ಯತೆ ಕೊಡದೆ ಅನುಭವಕ್ಕೆ ಆದ್ಯತೆ ನೀಡಿದಲ್ಲಿ ಮುಂದಿನ‌ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.ಹೆಣ್ಣು ಮಕ್ಕಳು ತಾಂತ್ರಿಕ ಶಿಕ್ಷಣ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಶಿಕ್ಷಣ ಪಡೆದ ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಂಸ್ಥೆಗೆ, ಊರಿಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಕಾಲೇಜಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ರೂ.5 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು ಮೈದಾನವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಂಡಿದ್ದಾರೆ‌.ಈ ಕಾಲೇಜಿಗೆ ಸ್ಥಳೀಯರು,ವರ್ತಕರು ಸುಮಾರು ನಲ್ವತ್ತು ಎಕರೆ ಜಾಗವನ್ನು ಕಡಿಮೆ ದರದಲ್ಲಿ ದಾನ ನೀಡಿ ಕಾಲೇಜು ಸ್ಥಾಪನೆಗೆ ಕಾರಣಿಕಾರ್ತರಾದರು ಎಂದು ದಾನಿಗಳ ಸಮಾಜ ಸೇವೆಯನ್ನು ಸ್ಮರಿಸಿದರು.ಇದೀಗ ಕಾಲೇಜು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ. ಈ ಹಿಂದೆ ಸರ್ಕಾರದ ಪಾಲಿಸಿ ಮೇರೆಗೆ ಪಾಲಿಟೆಕ್ನಿಕ್ ಕಾಲೇಜುಗಳನ್ನು

ಉನ್ನತ ದರ್ಜೆಗೆ ಏರಿಸಿ ಎಂಜಿನಿಯರಿಂಗ್ ಕಾಲೇಜುಗಳಾಗಿ  ಆರಂಭಿಸಲು ಕೈಗೊಂಡ ಕ್ರಮದಿಂದ ಕುಶಾಲನಗರ ಸರ್ಕಾರಿ ಎಂಜಿನಿಯರ್ ಕಾಲೇಜು ಆರಂಭಗೊಂಡಿತು ಎಂದರು. ನೂತನ ಕುಶಾಲನಗರ ತಾಲ್ಲೂಕಿನಲ್ಲಿ ರೂ.8 ಕೋಟಿ ಅನುದಾನದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಹಂತದಲ್ಲಿದೆ.ಮುಂದಿನ ವರ್ಷದಲ್ಲಿ ಶಾಸಕರೆ ಈ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದರು.ಹಾರಂಗಿ ರಸ್ತೆ ಸುಂದರನಗರದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ರೂ.42 ಕೋಟಿ ವೆಚ್ಚದಲ್ಲಿ ತಾಲ್ಲೂಕು ಆಸ್ಪತ್ರೆ ನಿರ್ಮಾಣವಾಗಲಿದೆ.ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ  ರೂ.11 ಕೋಟಿ ಅನುದಾನ ನೀಡಲಾಗಿದೆ. ನೀರಾವರಿ ಇಲಾಖೆಗೆ ರೂ.5 ಕೋಟಿ ಅನುದಾನ ತರುವಲ್ಲಿ ಶಾಸಕರು ಶ್ರಮಿಸಿದ್ದು,ಅವರ ಅಭಿವೃದ್ಧಿ ಕಾರ್ಯ ಶ್ಲಾಘನೀಯ ಎಂದರು.

ಕಾಂಗ್ರೆಸ್ ಮುಖಂಡರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ಮಂತರ್ ಗೌಡ ಶಾಸಕರಾಗಿ ಆಯ್ಕೆಯಾದ ಮೂರು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಹಾಪೂರವೇ ಹರಿದು ಬಂದಿದೆ.ಕಳೆದ ಇಪ್ಪತೈದು ವರ್ಷ ನಡೆಯದ ಅಭಿವೃದ್ಧಿ ಹಾಗೂ ನನೆಗುದ್ದಿಗೆ ಬಿದ್ದ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಶಾಸಕರು ಅನುದಾನ ತರುವ ಮೂಲಕ ಕಾರ್ಯಗತಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಸತೀಶ್ ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪರಶುರಾಮ್, ಪ್ರಾಧ್ಯಾಪಕರಾದ ಡಾ.ಸತೀಶ್,ಡಾ.ಸೀನಪ್ಪ, ಗೃಹ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಸದಸ್ಯ ಶಾಜಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ  ಶಶಿಭೀಮಯ್ಯ,ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇರ್ಫಾನ್ ಖಾನ್ ಮುಖಂಡರಾದ ಎಂ.ಎಂ.ಪ್ರಕಾಶ್, ಜಗದೀಶ್,ಚಂದ್ರಶೇಖರ್, ದಾಮೋದರ್,ದಿನೇಶ್ ಕುಮಾರ್, ನವೀನ್ ಕುಮಾರ್, ಮಲ್ಲಿಕಾರ್ಜುನ, ಎಚ್.ಕೆ.ನಟೇಶ್ ಗೌಡ, ಲೋಕನಾಥ್,ನಿವೃತ್ತ ಪ್ರಾಂಶುಪಾಲ ಎಚ್.ವಿ.ಶಿವಪ್ಪ,  ಗುತ್ತಿಗೆದಾರರ ಕೃಷ್ಣೇಗೌಡ ಮತ್ತಿತರರು ಪಾಲ್ಗೊಂಡಿದ್ದರು. ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ಜಯಣ್ಣ ನಿರೂಪಿಸಿದರು

admin
the authoradmin

Leave a Reply