ArticlesLatest

ವಿಶ್ವ ಜನಸಂಖ್ಯಾ ಸ್ಫೋಟ… ಬಾಂಬ್ ಸ್ಪೋಟಕ್ಕಿಂತಲೂ ಭೀಕರ… ಜನಸಂಖ್ಯೆಯಲ್ಲಿ ಭಾರತ ನಂ1

ಹೆಚ್ಚುತ್ತಿರುವ ಜನಸಂಖ್ಯೆ ಸರ್ವರೀತಿಯಲ್ಲಿಯೂ ಮಾರಕವಾಗಿ ಪರಿಣಮಿಸುತ್ತಿದೆ.. ಇವತ್ತು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಜನಸಂಖ್ಯೆ ಹೆಚ್ಚಳವೂ ಒಂದಾಗಿದೆ.. ಈ ಕುರಿತಂತೆ ಸಾಹಿತಿ, ಪತ್ರಕರ್ತ ಬನ್ನೂರು ಕೆ ರಾಜು ಅವರು ಇಲ್ಲಿ ಒಂದಷ್ಟು ವಿಚಾರಗಳನ್ನು ಲೇಖನದ ಮೂಲಕ ತೆರೆದಿಟ್ಟಿದ್ದಾರೆ… ಓದಿ

ಕ್ರಿಸ್ತಶಕ ಆರಂಭದ ಕಾಲದಲ್ಲಿ ಜಗತ್ತಿನ ಜನಸಂಖ್ಯೆ ಇದ್ದದ್ದು ಕೇವಲ 30 ಕೋಟಿ.  ಅದೇ 1804 ರಲ್ಲಿ ಜಗತ್ತಿನ ಜನಸಂಖ್ಯೆ 1 ಬಿಲಿಯನ್.  ಹಲವು ಸಾಂಕ್ರಾಮಿಕ ರೋಗ ರುಜಿನಗಳಿಂದ, ಸಾಮೂಹಿಕ ಸಾವುಗಳಿಂದಾಗಿ 20ನೇ ಶತಮಾನದವರೆಗೆ ಈ ಸಂಖ್ಯೆಯಲ್ಲೇನೂ ಹೆಚ್ಚು ಬದಲಾವಣೆಯಾಗಲಿಲ್ಲ.  ಆದರೆ 1927 ರಲ್ಲಿ ಜಗತ್ತಿನ ಜನಸಂಖ್ಯೆ 2 ಬಿಲಿಯನ್‌ಗೇರಿತು.  ಇದು 1987 ರಲ್ಲಿ 5 ಬಿಲಿಯನ್ ತಲುಪಿ 1999 ಅಕ್ಟೋಬರ್ 12 ರಂದು 6 ಬಿಲಿಯನ್ ಆಗಿತ್ತು.  ಆದರೀಗ ಜಗತ್ತಿನ ಜನಸಂಖ್ಯೆ ಎಷ್ಟು ಗೊತ್ತೆ? 2011 ಅಕ್ಟೋಬರ್ 26ರಂದು ವಿಶ್ವ ಜನಸಂಖ್ಯೆಯ ಜನಸಂಖ್ಯಾನಿಧಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದ ಜನಸಂಖ್ಯೆ ಬರೋಬ್ಬರಿ 7 ಬಿಲಿಯನ್! ಒಂದು ಬಿಲಿಯನ್ ಎಂದರೆ ನೂರು ಕೋಟಿ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

1ರ ಮುಂದೆ ಒಂಬತ್ತು ಸೊನ್ನೆಗಳು 1000000000. ಏಳು ಬಿಲಿಯನ್ ಎಂದರೆ 7ರ ಮುಂದೆ ಒಂಬತ್ತು ಸೊನ್ನೆಗಳು 7000000000, ಏಳು ನೂರು ಕೋಟಿ! ಜಗತ್ತಿನ ಜನಸಂಖ್ಯೆ 2011 ವರದಿಯನ್ನು ಬರ್ಲಿನ್, ಕ್ಯಾನ್‌ಬೆರಾ, ಹೇಗ್, ಲಂಡನ್, ಮಾಸ್ಕೊ, ರೋಮ್, ಸ್ಟಾಕ್ ಹೋಮ್, ಟೋಕಿಯೋ, ವಾಷಿಂಗ್ಟನ್ ಸೇರಿದಂತೆ ಜಗತ್ತಿನ 120 ರಾಜಧಾನಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ವರದಿಯು ಅರೆಬಿಕ್, ಚೀನಿ, ಇಂಗ್ಲೀಷ್, ಫ್ರೆಂಚ್, ರಷ್ಯನ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ಲಭ್ಯವಿದೆ.

ವಿಶ್ವ ಜನಸಂಖ್ಯಾ ದಿನಾಚರಣೆ..

ವಿಶ್ವದ ಜನಸಂಖ್ಯೆ ಏಳುನೂರು ಕೋಟಿ ಎಂದರೇನು ಸಾಮಾನ್ಯವೆ? ಇದರಿಂದ ಮುಂದೆ ಬಂದೊದಗಬಹುದಾದ ಸಂಕಷ್ಟದ ದಿನಗಳನ್ನು ಊಹಿಸಲೂ ಆಗದಷ್ಟು ಆತಂಕ ಜಗತ್ತಿಗಿದೆ.  ಹಾಗಾಗಿ ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಏರುವಿಕೆಯನ್ನು ನಿಯಂತ್ರಿಸಲು ಹಾಗೂ ಜಗತ್ತಿನ ಜನಭರಿತ ಸ್ವರೂಪದ ಬಗ್ಗೆ ಜನಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜನಸಂಖ್ಯಾನಿಧಿಯು ಜಗತ್ತಿನಾದ್ಯಂತ ಜನಸಂಖ್ಯೆ ಸಮಸ್ಯೆ ಕುರಿತು ಪ್ರತಿ ವರ್ಷ ಮಾಹಿತಿ ನೀಡಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿದೆ.  ಈ ಹಿನ್ನೆಲೆಯಲ್ಲಿ ಇಸವಿ 1974ನ್ನು ‘ವಿಶ್ವ ಜನಸಂಖ್ಯಾ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿತ್ತು.  ಹಾಗೆಯೇ 1987ರಲ್ಲಿ ಜಗತ್ತಿನ ಜನಸಂಖ್ಯೆ 500 ಕೋಟಿ ಮುಟ್ಟಿದ ದಿನದಂದು ವಿಶ್ವಸಂಸ್ಥೆ ‘ವಿಶ್ವ ಜನಸಂಖ್ಯಾ ದಿನ’ ಎಂದು ಘೋಷಿಸಿ ಪ್ರತಿವರ್ಷ ಆಚರಿಸಲಾಗುತ್ತಿದೆ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

ಅದರಂತೆ ಜುಲೈ ಹನ್ನೊಂದು ವಿಶ್ವ ಜನಸಂಖ್ಯಾ ದಿನ.  ಕನಿಷ್ಟ ಈ ದಿನವಾದರೂ ಜನಸಂಖ್ಯಾ ಸ್ಫೋಟದ ಪರಿಣಾಮದ ಬಗ್ಗೆ ಪ್ರತಿಯೊಬ್ಬರೂ ಚಿಂತಿಸುವ ಅವಶ್ಯಕತೆ ಖಂಡಿತ ಇದೆ.  ಅದಕ್ಕಾಗಿಯೇ ಈ ದಿನವನ್ನು ಗೊತ್ತು ಮಾಡಲಾಗಿದೆ.  ಆದರೆ ಇದರ ಬಗ್ಗೆ ಆಳವಾಗಿ ಇಳಿದು ಇದು ಏರಿ ನಿಂತಿರುವ ಎತ್ತರವನ್ನು ಕೊರಳೆತ್ತಿ ನೋಡಿದರೆ ಗಾಬರಿಯಾಗುತ್ತದೆ.  ಮುಂದಿನ ದಿನಗಳಲ್ಲಿ ಮಾನವ ಕೋಟಿಗೆ ಜನಸಂಖ್ಯಾ ಸ್ಫೋಟದಿಂದ ಬಂದೊದಗಬಹುದಾದ ವಿಪತ್ತುಗಳ ಸರಮಾಲೆಗಳನ್ನು ಊಹಿಸಿಕೊಂಡರೆ ಸಾಕು ಒಂದು ಕ್ಷಣ ಎದೆಬಡಿತವೇ ನಿಂತಂತಾಗುತ್ತದೆ!

ಜನಸಂಖ್ಯಾ ಸ್ಪೋಟ ಪ್ರಳಯಕ್ಕಿಂತ ಅಪಾಯಕಾರಿ

ಪ್ರಳಯ ಪ್ರಳಯವೆಂದು ಬೊಬ್ಬೆಯಿಡುತ್ತಿರುವ ಮಂದಿಗೆ ಇನ್ನೂ ಗೊತ್ತಿಲ್ಲ; ಎಲ್ಲ ಪ್ರಳಯಕ್ಕಿಂತಲೂ ಅಪಾಯಕಾರಿಯಾದ ಜನಸಂಖ್ಯಾ ಸ್ಫೋಟದ ಪ್ರಳಯವೊಂದಿದೆಯೆಂದು.  ಇದು ಅಗತ್ಯ ಮೀರಿ ಸ್ಫೋಟಗೊಂಡರೆ ಜಗತ್ತು ಉಳಿದೀತೆ? ಭೂಮಿಯ ಮೇಲೆ ಜನ ಬದುಕಲಾದೀತೆ? ಅನ್ನವಿರಲಿ, ಗಾಳಿ, ನೀರು, ನೆರಳು ಯಾವುದೂ ಕೈಗೆಟುಕದಾಗುತ್ತದೆ.  ಒಂದು ಪಕ್ಷ ಎಟುಕಿದರೂ ಅರೆಹೊಟ್ಟೆ, ಅರೆ ಉಸಿರು, ಅರೆ ಗುಟುಕು, ಅರೆವಾಸವಾಗಿ ಸೆರೆವಾಸಕ್ಕಿಂತಲೂ ಮಾನವಕುಲ ಕಷ್ಟಪಡಬೇಕಾಗುತ್ತದೆ.  ಏಕೆಂದರೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಶರವೇಗದಲ್ಲಿ ಇಂದು ದಿನದಿಂದ ದಿನಕ್ಕೆ ಜಗತ್ತಿನ ಜನಸಂಖ್ಯೆ ಏರುತ್ತಿದೆ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

ಬಹುಶಃ ಇದೇ ಪ್ರಳಯದ ಮುನ್ಸೂಚನೆ ಇರಬಹುದೇನೋ? ಮಿತಿ ಮೀರಿ ಜನಸಂಖ್ಯೆ ಸ್ಫೋಟಗೊಂಡರೆ ಮುಗಿಯಿತು, ಜಗತ್ತಿಗೆ ಯಾವ ಬಾಂಬನ್ನೂ ಹಾಕಲೇಬೇಕಾಗಿಲ್ಲ.  ಯಾವ ಚಂಡಮಾರುತವೂ ಅಪ್ಪಳಿಸಬೇಕಾಗಿಲ್ಲ.  ಜನಸಂಖ್ಯಾ ಸ್ಫೋಟವೊಂದೇ ಎಲ್ಲಾ ವಿನಾಶಕ್ಕೂ ನಾಂದಿಯಾಡಿಬಿಡುತ್ತದೆ.  ಇದಕ್ಕಿಂತ ಪ್ರಳಯಬೇಕೆ?    ಜಗತ್ತಿನ ಜನಸಂಖ್ಯೆ ಎಷ್ಟು ವೇಗವಾಗಿ ಹೆಚ್ಚುತ್ತಿದೆಯೋ ಅಷ್ಟೇ ವೇಗದಲ್ಲಿ ಎಲ್ಲ ಸಮಸ್ಯೆಗಳೂ ಆಕ್ಟೋಪಸ್ ರೀತಿ ಜಗತ್ತನ್ನು ಆಕ್ರಮಿಸುತ್ತಿವೆ.

ಅದರಲ್ಲೂ ನಮ್ಮ ಭಾರತ ದೇಶದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರ್ಷ ವರ್ಷವೂ ಜನಸಂಖ್ಯೆ ಬೆಟ್ಟದಂತೆ ಬೆಳೆಯುತ್ತಿದ್ದು ಇದರಿಂದಾಗಿ ದೇಶದ ಅಭಿವೃದ್ಧಿಗೆ ಅಡ್ಡಲಾಗುವಂತಹ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಒಂದು ರೀತಿಯಲ್ಲಿ ಯಾವುದೇ ದೇಶಕ್ಕಾದರೂ ಜನಸಂಖ್ಯೆಯೇ ಸಂಪತ್ತು.  ಆದರದು ಅತಿಯಾದರೆ ಅದೇ ದೇಶಕ್ಕೆ ಆಪತ್ತು. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆಂಬ ಮಾತು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ.

ಭಾರತದ ಜನಸಂಖ್ಯೆ ವಿಶ್ವದಲ್ಲಿಯೇ ನಂ1

ಜನಸಂಖ್ಯೆ ನಮ್ಮಲ್ಲಿ ಎಷ್ಟು ಬೇಗ ಹೆಚ್ಚುತ್ತಾ ಹೋಗುತ್ತಿದೆ ಅಂದರೆ ನಮ್ಮ ದೇಶದ ಜನಸಂಖ್ಯೆ 1901 ರಲ್ಲಿ 23.84 ಕೋಟಿ ಇದ್ದದ್ದು, 1921 ರಲ್ಲಿ 25.13 ಕೋಟಿ, 1931 ರಲ್ಲಿ 27.89 ಕೋಟಿ, 1951 ರಲ್ಲಿ 36.10 ಕೋಟಿ, 1961 ರಲ್ಲಿ 43.92 ಕೋಟಿ, 1971 ರಲ್ಲಿ 54.82 ಕೋಟಿ, 1981 ರಲ್ಲಿ 58.38 ಕೋಟಿ, 1991 ರಲ್ಲಿ 84.82 ಕೋಟಿಯಾಗಿದ್ದು 2001 ರ ಜನಗಣತಿಯ ಪ್ರಕಾರ ನಮ್ಮ ದೇಶದ ಜನಸಂಖ್ಯೆ 102 ಕೋಟಿ.  ಆದರೀಗ ಅದು 2011ರ ಜನಗಣತಿಯ ಪ್ರಕಾರ 121 ಕೋಟಿ.  ಹತ್ತು ವರ್ಷದಲ್ಲಿಯೇ ತುಸು ಹೆಚ್ಚು ಕಡಿಮೆ ಇಪ್ಪತ್ತು ಕೋಟಿಯಷ್ಟು ಹೆಚ್ಚಿದರೆ ಬರಲಿರುವ ದಶಕಗಳಲ್ಲಿ ಜನಸಂಖ್ಯೆ ಯಾವ ಪ್ರಮಾಣದಲ್ಲಿ ಹೆಚ್ಚಬಹುದೆಂಬುದರ ಅರಿವು ಯಾರಿಗಾದರೂ ಅರ್ಥವಾಗುತ್ತದೆ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

ಹಾಗೆಯೇ ಭಾರತಕ್ಕಿಂತಲೂ ಜನಸಂಖ್ಯೆ ಹೆಚ್ಚಳದಲ್ಲಿ ಹಲವು ಹೆಜ್ಜೆ ಮುಂದೆ ಇದ್ದು, ವಿಶ್ವದಲ್ಲೇ ನಂಬರ್ ಒನ್ ಸ್ಥಾನಗಳಿಸಿರುವ ಚೀನಾ ದೇಶದ ಜನಸಂಖ್ಯೆಯ ಏರಿಕೆಯ ವೇಗ ಊಹಿಸಲಸದಳವೇ ಸರಿ!  ಒಂದು ಅಚ್ಚರಿಯ ವಿಷಯವೆಂದರೆ 2050ಕ್ಕೆ ಭಾರತದ ಜನಸಂಖ್ಯೆ ಚೀನಾದೇಶವನ್ನು ಹಿಂದೆ ತಳ್ಳಿ ವಿಶ್ವದಲ್ಲಿಯೇ ಅತ್ಯಧಿಕ ಜನಸಂಖ್ಯೆ ಹೊಂದಿದ ದೇಶವಾಗಿ ಹೊರಹೊಮ್ಮುತ್ತದೆಂದು ತಜ್ಞರು ಅಂದಾಜಿಸಿದ್ದಾರೆ.

2050ರ ಹೊತ್ತಿಗೆ ವಿಶ್ವಜನಸಂಖ್ಯೆಯೂ ಏರಿಕೆಯಾಗಿ ಈಗಿರುವ 700 ಕೋಟಿ ಜನಸಂಖ್ಯೆಗೆ 3.5 ಶತಕೋಟಿ ಜನ ಸೇರುತ್ತಾರೆಂದೂ ಅಂದಾಜಿಸಲಾಗಿದೆ. ಅಲ್ಲಿಗೆ ಪ್ರಪಂಚದ ಜನಸಂಖ್ಯೆ 1000 ಕೋಟಿ ಮೀರುತ್ತದೆ.  ಇದರಿಂದಾಗಿ ಜನಜೀವನದ ಮೂಲಭೂತ ಸೌಲಭ್ಯಗಳು ಸೇರಿದಂತೆ ಎಲ್ಲದರ ಮೇಲೂ ಹೊಡೆತ ಬೀಳಲಿದ್ದು ಜೀವನಾಧಾರವೂ ಅತಿಮುಖ್ಯವೂ ಆದ ಜಲಮೂಲಕ್ಕೆ ಸ್ವಲ್ಪ ಹೆಚ್ಚಿನ ಹೊಡೆತವೇ ಬೀಳುತ್ತದೆ.  ಏಕೆಂದರೆ ಜನಸಂಖ್ಯಾ ಪ್ರವಾಹ ಏರುತ್ತಿದೆ ಎಂದರೆ ನೀರಿನ ಬಳಕೆ ಹೆಚ್ಚುತ್ತಿದೆ ಎಂದೇ ಅರ್ಥ.  ಇದು ಜಲಮೂಲದ ಮೇಲಿನಷ್ಟೇ ನೈಸರ್ಗಿಕ ವ್ಯವಸ್ಥೆಯ ಮೇಲೂ ತೀವ್ರ ಪರಿಣಾಮ ಬೀರುತ್ತದೆ.

ನೀರನ್ನು ಮಾನವನು ನೇರವಾಗಿ ಬಳಕೆ ಮಾಡುತ್ತಿರುವುದರಿಂದ ಮತ್ತು ಬೇಸಾಯಕ್ಕಾಗಿ ಅಂತರ್ಜಲವನ್ನು ದುಡಿಸಿಕೊಳ್ಳುತ್ತಿರುವುದರಿಂದ ಜನಸಂಖ್ಯಾ ಸ್ಫೋಟದಿಂದ ವಿಶ್ವದ ಮುಖ್ಯ ಜಲಕುಹರ (ನೀರ್ಪೊಟರೆ) ಗಳು ಜನಸಂಖ್ಯಾ ಏರಿಕೆಯ ವೇಗದಲ್ಲೇ ಕ್ರಮೇಣ ಬತ್ತಿಹೋಗುತ್ತವೆ.  ಸದ್ಯಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಪಂಪುಗಳು ಅಂತರ್ಜಲ ಎತ್ತುವ ಕಾರ್ಯದಲ್ಲಿ ತೊಡಗಿವೆ.  ಜನಸಂಖ್ಯಾ ದೈತ್ಯ ದೇಶಗಳೆಂದೇ ಹೆಸರಾಗಿರುವ ಚೀನಾ ಮತ್ತು ಭಾರತದಂಥ ದೇಶಗಳಲ್ಲಿ ತಡೆಯಲಸಾಧ್ಯವಾದ ವೇಗದಲ್ಲಿ ಅಂತರ್ಜಲವನ್ನು ತೆಗೆದು ನೀರಾವರಿಗಾಗಿ ಬಳಸಲಾಗುತ್ತಿದೆ.  ಮೆಕ್ಸಿಕೊ ನಗರ, ಬ್ಯಾಂಕಾಕ್, ಮನಿಲಾ, ಬೀಜಿಂಗ್, ಮದ್ರಾಸ್ ಮತ್ತು ಶಾಂಘ್ಯೆ ಇವುಗಳೆಲ್ಲ 10 ರಿಂದ 50 ಮೀಟರ್ ಜಲಕುಹರ ಬತ್ತುವಿಕೆಯಿಂದ ಬಳಲುತ್ತಿರುವ ಪಟ್ಟಣಗಳು.  ಇದಕ್ಕೆ ಕಾರಣವೇ ಜನಸಂಖ್ಯಾ ಸ್ಫೋಟ.

ಭಾರತದಲ್ಲಿ ಜನಸಂಖ್ಯೆ ಹೆಚ್ಚಳ ಏಕೆ?

ನಮ್ಮ ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಬಹುಪತ್ನಿತ್ವ, ಅತಿ ಸಂತಾನಾಪೇಕ್ಷೆ, ಶಿಶು ಮರಣ, ವ್ಯಭಿಚಾರ, ಬಾಲ್ಯ ವಿವಾಹ, ಪುನರ್ವಿವಾಹಗಳು, ಧಾರ್ಮಿಕ ನಂಬಿಕೆಗಳು ಸೇರಿದಂತೆ ಅನೇಕ ಕಾರಣಗಳುಂಟು.  ಇವುಗಳಲ್ಲಿ ಗಂಡು ಮಗುವೇ ಬೇಕೆಂಬ ಬಯಕೆಯೂ ಒಂದು ಮುಖ್ಯ ಕಾರಣ.  ಹಳ್ಳಿಯ ಗಮಾರರಿರಲಿ ನಗರದ ನವನಾಗರಿಕರೂ ಕೂಡ ಇದೇ ಮನೋಭಾವದವರೇ ಹೆಚ್ಚು.  ನೂರಾರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಶಿಕ್ಷಕರಿಂದ ಹಿಡಿದು ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಹಾಗೂ ಮಂತ್ರಿ ಮಹೋದಯರುಗಳ ತನಕ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೇ ಗಂಡು ಸಂತಾನಕ್ಕಾಗಿ ಹಂಬಲಿಸುತ್ತಾರೆ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

ಒಂದು ಗಂಡು ಮಗುವಿನ ನಿರೀಕ್ಷೆಯಲ್ಲಿ ಹತ್ತಾರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವವರು ನಮ್ಮಲ್ಲಿ ಬೇಕಾದಷ್ಟು ಮಂದಿ ಇದ್ದಾರೆ.  ಹೆಂಡತಿ ಎಂದರೆ ಮಕ್ಕಳನ್ನು ಹೆರುವ ಯಂತ್ರವೆAದೇ ಭಾವಿಸಿರುವ ಮಹಾನುಭಾವರು ನಮ್ಮಲ್ಲಿ ಹೇರಳವಾಗಿದ್ದಾರೆ. ಪುತ್ರ ಸಂತಾನ ಮೋಕ್ಷಕ್ಕೆ ಮಾರ್ಗವೆಂಬ ಮೂಢನಂಬಿಕೆಗೆ ದಾಸರಾಗಿರುವ ಇಂಥವರಿAದ ಜನಸಂಖ್ಯೆ ಹೆಚ್ಚುತ್ತಲೇ ಇದೆ.  ದುರಂತವೆAದರೆ ಬಹಳ ಕಡೆ ಹೆಂಡತಿಯರೂ ಕೂಡ ತಾವೂ ಸಹ ಒಂದು ಹೆಣ್ಣೆಂಬುದನ್ನು ಮರೆತು ಗಂಡನ ಮೌಢ್ಯಕ್ಕೆ ನೀರೆರೆದು ಗಂಡು ಮಗುವಿಗಾಗಿ ಕನವರಿಸುತ್ತಾರೆ.  ಇಷ್ಟೇ ಅಲ್ಲದೆ ಲಿಂಗ ಪರೀಕ್ಷೆ ಮಾಡಿಸಿ ಹೆಣ್ಣು ಮಗುವಿನ ಭ್ರೂಣ ಹತ್ಯೆಯನ್ನು ಮಾಡಿಸುತ್ತಾರೆಂದರೆ ಇದೆಂಥಾ ವಿಪರ್ಯಾಸ ಅಲ್ಲವೇ? ಇದಕ್ಕಿಂತ ಅಮಾನವೀಯ ಕೆಲಸ ಮತ್ತೊಂದುಂಟೆ?

ನಾವು ಯಾವ ಕಾಲದಲ್ಲಿದ್ದೇವೆಂಬುದರ ಪರಿವೆಯೇ ಇಲ್ಲದೆ ಇವತ್ತು ಬಹುತೇಕ ಮಂದಿ ಇನ್ನೂ ಪುರಾತನ ಕಾಲದ ಕಂದಾಚಾರದ ಕಕ್ಷೆಯಲ್ಲೇ ಸುತ್ತುತ್ತಾ ಅದೇ ರೀತಿ ನಡೆದುಕೊಳ್ಳುತ್ತಾರೆ.  ಇಪ್ಪತ್ತೊಂದನೇ ಶತಮಾನದ ನವನಾಗರಿಕತೆಯ ಆಧುನಿಕ ಕಾಲಘಟ್ಟದಲ್ಲೂ ಹೆಣ್ಣು-ಗಂಡುಗಳೆಂಬ ಬೇಧ ಮಾಡುತ್ತಾ ಪುತ್ರ ಸಂತಾನಕ್ಕೆ ಪ್ರಥಮಾದ್ಯತೆ ನೀಡುತ್ತಾರೆ.  ಹೀಗಾಗಿ ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮನೋಭಾವ ಬೆಳೆಯುತ್ತಿದೆ.  ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವಿರಿ ಕಣ್ಣು ಕಾಣದ ಗಾವಿಲರೆ ಎಂಬ ಸಂಚಿ ಹೊನ್ನಮ್ಮಳ ಸಾಂಗತ್ಯದ ಸಾಲುಗಳಂತೆ ಕಣ್ಣಿದ್ದೂ ಕುರುಡರಾಗಿ ವರ್ತಿಸುತ್ತಾರೆ.  ನಿಮ್ಮನ್ನು ಹಡೆದ ತಾಯಿ ಪೆಣ್ಣಲ್ಲವೇ? ಎಂಬ ಸಂಚಿ ಹೊನ್ನಮ್ಮಳ ಅದೇ ಸಾಂಗತ್ಯದ ಮುಂದಿನ ಇದೊಂದು ಸಾಲವನ್ನು ಅರಿತುಕೊಂಡರೆ ಸಾಕು ಪುತ್ರ ವ್ಯಾಮೋಹದ ಹುಚ್ಚು ಬಿಟ್ಟು ಹೋದೀತು, ಜನಸಂಖ್ಯಾ ಹೆಚ್ಚಳಕ್ಕೂ ಕಡಿವಾಣ ಬಿದ್ದೀತು.

ಮಹಿಳೆಯರು ಸಾಧಿಸದ ಕ್ಷೇತ್ರವೇ ಇಲ್ಲ…

ಹೆಣ್ಣು ಅಬಲೆ ಎಂಬ ಮಾತು ಇಂದಿರಾಗಾಂಧಿಯ ಹಿಂದಿನ ಕಾಲಕ್ಕೇ ಮುಗಿದು ಹೋದ ಮಾತಾಯಿತು.  ಇಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗಿಂತಲೂ ಒಂದು ಹೆಜ್ಜೆ ಮುಂದಿದ್ದು ತಾನು ಅಬಲೆಯಲ್ಲ ಸಬಲೆ ಎಂದು ನಿರೂಪಿಸುತ್ತಿರುವ ನಿದರ್ಶನಗಳು ನಮ್ಮ ಕಣ್ಮುಂದೆಯೇ ಸಾವಿರ ಸಾವಿರ ಇವೆ.  ಮಹಿಳೆಯರು ಹೆಜ್ಜೆ ಹಾಕದ ಯಾವುದಾದರೂ ಕ್ಷೇತ್ರ ಇಂದು ನಮ್ಮಲ್ಲಿದೆಯೇ? ಎಲ್ಲೆಲ್ಲೂ ಮಹಿಳೆ ಮಹೋನ್ನತಳಾಗಿಯೇ ಮೆರೆಯುತ್ತಿದ್ದಾಳೆ.  ಆದರೂ ಹೆಣ್ಣೆಂದರೆ ಕೇವಲವಾಗಿ ಕಾಣುವ ಪರಿ ನಮ್ಮಲ್ಲಿನ್ನೂ ಬಿಟ್ಟಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಇದು ಸ್ವಲ್ಪ ಕಡಿಮೆಯಾಗಿದೆಯಷ್ಟೆ.  ಅದೂ ನಗರ ಪ್ರದೇಶಗಳಲ್ಲಿ ಮಾತ್ರ.  ವೇದಗಳ ಕಾಲದಿಂದಲೂ ಸ್ತ್ರೀಯರು ಉನ್ನತ ಸ್ಥಾನ ಅಲಂಕರಿಸಿರುವ ಮತ್ತು ಉನ್ನತ ಸಾಧನೆಗೈದಿರುವ ಅನೇಕ ಉದಾಹರಣೆಗಳಿವೆ.  ಈಗಂತೂ ಸ್ತ್ರೀಯರು ಪಡೆಯದ ಶಿಕ್ಷಣವಿಲ್ಲ.  ಅವರು ಮಾಡದ ಕೆಲಸಗಳಿಲ್ಲ, ಅವರಿಂದ ಸಾಧ್ಯವಾಗದ ಸಾಧನೆಗಳು ಇಲ್ಲವೇ ಇಲ್ಲ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

ಪೆಪ್ಸಿ ಕಂಪನಿಯ ಇಂದ್ರಾ ನೂಯಿ, ಬಯೋ ಟೆಕ್‌ನ ಕಿರಣ್ ಮುಜೆಂದರ್ ಷಾ, ಪೊಲೀಸ್ ಅಧಿಕಾರಿ ಕಿರಣ್‌ಬೇಡಿ, ಗಗನಯಾನಿ ಸುನೀತಾ ವಿಲಿಯಮ್ಸ್, ಪರಿಸರವಾದಿ ವಂದನಾ ಶಿವ, ಸಾಮಾಜಿಕ ಕಾರ್ಯಕರ್ತೆ ನಟಿ ಶಬನಾ ಅಜ್ಮಿ, ಬೂಕರ್ ಖ್ಯಾತಿಯ ಅರುಂಧತಿ ರಾಯ್ ಮತ್ತು ಕಿರಣ್ ದೇಸಾಯಿ, ದೇಶದ ಮೊದಲ ಮಹಿಳಾ ಸ್ಪೀಕರ್ ಮೀರಾ ಕುಮಾರ್, ಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಮಾಯಾವತಿ, ರಾಜಕೀಯ ಮುತ್ಸದ್ಧಿ ಸೋನಿಯಾಗಾಂಧಿ, ಖ್ಯಾತ ಲೇಖಕಿ, ಉದ್ಯಮಿ ಸುಧಾಮೂರ್ತಿ, ದೇಶದ ಮೊದಲ ರಾಷ್ಟçಪತಿ ಪ್ರತಿಭಾ ಪಾಟೀಲ್…… ಹೀಗೆ ಹೇಳುತ್ತಾ ಹೋದರೆ ದೇಶದ ತುಂಬಾ, ವಿಶ್ವದ ತುಂಬಾ ಮಹಾನ್ ಸಾಧಕಿಯರ ದೊಡ್ಡ ಪಟ್ಟಿಯೇ ಆಗುತ್ತದೆ.

ಗಂಡಿರಲಿ, ಹೆಣ್ಣಿರಲಿ ಬಾಳು ಬೆಳಗಲು ಮಗುವೊಂದಿರಲಿ

ಇವರುಗಳೆಲ್ಲಾ ಯಾವ ಪುರುಷರಿಗಿಂತ ಕಮ್ಮಿ ಇದ್ದಾರೆ? ನಿಜ ಹೇಳಬೇಕೆಂದರೆ ಪುರುಷನಿಂದಾಗದ ಅದೆಷ್ಟೋ ಸಾಧನೆಗಳನ್ನು ಈ ಸ್ತ್ರೀ ಶಕ್ತಿಗಳು ಮಾಡಿ ತೋರಿಸಿದ್ದಾರೆ.  ಹೀಗಿದ್ದೂ ಸಹ ಹೆಣ್ಣಿನ ಕುರಿತು ಕೀಳರಿಮೆ ಏಕೆ? ಗಂಡು ಮಗುವೇ ಬೇಕೇಕೆ? ಈ ಧೋರಣೆ ಸಂಪೂರ್ಣ ಬದಲಾಗಿ ಗಂಡಿರಲಿ, ಹೆಣ್ಣಿರಲಿ ಬಾಳು ಬೆಳಗಲು ಮಗುವೊಂದಿರಲಿ ಎಂಬ ಮನೋಭಾವ ಎಲ್ಲರದ್ದೂ ಆಗಬೇಕು.  ಆಗ ಮಾತ್ರ ಅಷ್ಟಲ್ಲದಿದ್ದರೂ ಒಂದಿಷ್ಟಾದರೂ ಜನಸಂಖ್ಯಾ ನಿಯಂತ್ರಣವಾದೀತು.  ಇದರಿಂದ ಕುಟುಂಬಕ್ಕೂ ಕ್ಷೇಮ, ದೇಶಕ್ಕೂ ಕ್ಷೇಮ, ವಿಶ್ವಕ್ಕೂ ಕ್ಷೇಮ.

ಇಂದು ಜನಸಂಖ್ಯಾ ಹೆಚ್ಚಳದ ವೇಗ ವಿಶ್ವವನ್ನೇ ಕಾಡುತ್ತಿದ್ದು ಇದನ್ನು ಕಡಿಮೆಗೊಳಿಸುವಲ್ಲಿ ಎಲ್ಲ ದೇಶಗಳಲ್ಲೂ ವಿಶ್ವಪ್ರಯತ್ನವೇ ನಡೆಯುತ್ತಿದೆ.  ಅದರಲ್ಲೂ ವಿಶೇಷವಾಗಿ ಚೀನಾ ಮತ್ತು ಭಾರತ ಎಂಬೆರೆಡು ಜನಸಂಖ್ಯಾ ದೈತ್ಯ ದೇಶಗಳಲ್ಲಿ ಜನಸಂಖ್ಯೆಯ ಬಳುವಳಿಯಾದ ಬಡತನ ತಗ್ಗಿಸುವ ಪ್ರಕ್ರಿಯೆ ಭರದಿಂದ ಸಾಗಿದ್ದು ಇದರೊಡನೆ ಜನಸಂಖ್ಯೆ ನಿಯಂತ್ರಿಸುವ ಕಾರ್ಯವೂ ಅಷ್ಟೇ ವೇಗವಾಗಿ ನಡೆಯುತ್ತಿದೆ.  ಈ ಕಾರ್ಯಕ್ಕೆ ವಿಶ್ವವೇ ಬೇಡುತ್ತಿದೆ ಪ್ರತಿಯೊಬ್ಬ ಪ್ರಜೆಯ ಸಹಕಾರವನ್ನು. ನಾವಿದನ್ನು ನೀಡುತ್ತೇವೆಂಬ ಪ್ರತಿಜ್ಞೆಯನ್ನು ಇಂದೇ ಮಾಡಬೇಕಾಗಿದೆ.

ಬನ್ನೂರು ರಾಜು ಅವರು ಬರೆದಿರುವ ಇತರೆ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ…

 

admin
the authoradmin

Leave a Reply