ArticlesLatest

ಐನ್ ಮನೆಯ ಬೀಗ ತೆಗೆಯೋಣ… ದೀಪ ಹಚ್ಚೋಣ… ಒಗ್ಗಟ್ಟಿನಿಂದ ಬದುಕೋಣ!

ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-31

ಎಲ್ಲಿಯೂ ನೋಡಲಾಗದ ಒಂದು ಸಂಸ್ಕೃತಿ ಕೊಡಗಿನದ್ದಾಗಿದೆ. ಅದು ನಮ್ಮ ಹೆಮ್ಮೆಯೂ ಹೌದು… ಕೂಡು ಕುಟುಂಬದಲ್ಲಿ ಬಾಳಿ ಬದುಕಿ ಬಂದಿರುವುದಕ್ಕೆ ಐನ್ ಮನೆಗಳು ಸಾಕ್ಷಿಯಾಗಿವೆ. ಈ ಐನ್ ಮನೆಗಳ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಬರೆದಿದ್ದಾರೆ… ಒಮ್ಮೆ ಓದಿ ಬಿಡಿ…

ಐನ್ ಮನೆಗಳು ಬೀಗ ಬಿದ್ದು ಬಣಗುಡುತ್ತಾ ಇರಲು ಬಿಡಬಾರದು. ಮನೆಗೆ ಬೀಗ ಬಿದ್ದು, ಧೂಳು ತುಂಬಿಕೊಂಡು, ನಿಧಾನವಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಕಾಲ ಬದಲಾಗಿದೆ. ಜೀವನಶೈಲಿ ಬದಲಾಗಿದೆ. ಆದರೆ ನಮ್ಮ ಬೇರುಗಳನ್ನು ನಾವು ಮರೆಯಲು ಸಾಧ್ಯವಿಲ್ಲ.

ಇದನ್ನೂಓದಿ: ಡೈವರ್ಸ್ ಏಕೆ ಆಗುತ್ತಿವೆ? ಮನೆ ಒಳಗಿನ ಮನಸ್ಸು ಅರ್ಥವಾದರೆ ದೇವರು, ಎಡವಿದರೆ ದೂರ.. ದೂರ…

ಒಂದು ಮನೆತನದ ಆತ್ಮವೇ ಆ ಐನ್ ಮನೆಯಲ್ಲಿ ನೆಲೆಸಿರುತ್ತದೆ. ಆ ಮನೆ ಬಣಗುಟ್ಟಿದರೆ, ಅದರೊಂದಿಗೆ ಒಂದು ಮನೆತನದ ಇತಿಹಾಸವೂ ನಿಧಾನವಾಗಿ ಧೂಳಾಗುತ್ತದೆ. ಆದ್ದರಿಂದ ಬೀಗ ಬಿದ್ದಿರುವ ಐನ್ ಮನೆಗಳ ಪುನಶ್ಚೇತನಕ್ಕೆ ಹೊಸ ರೂಪುರೇಷೆಗಳನ್ನು ರೂಪಿಸಬೇಕಾಗಿದೆ. ಹಳೆಯದನ್ನೇ ಹಿಡಿದುಕೊಂಡು ಕುಳಿತುಕೊಳ್ಳುವ ಕಾಲವಲ್ಲ ಇದು; ಬದಲಾಗುತ್ತಿರುವ ಜೀವನಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿಗೂ ಹೊಸ ಜೀವ ತುಂಬುವ ಕಾಲ.

ಪ್ರತಿ ತಿಂಗಳು ಒಂದು “ಐನ್ ಮನೆ ದಿನ”

ಐನ್ ಮನೆಯಲ್ಲಿ ನಂದಾದೀಪ ಪ್ರತಿದಿನವೂ ಬೆಳಗಿದರೆ ಅತ್ಯಂತ ಉತ್ತಮ. ಆದರೆ ಅದು ಸಾಧ್ಯವಾಗಲು ಮೊದಲು ಕುಟುಂಬದವರು ಒಟ್ಟಾಗಿ ಕುಳಿತು ಯೋಚಿಸಬೇಕು. ಊರಿನಿಂದ ದೂರ ಹೋದ ಮಕ್ಕಳಿಗೆ ವಾರಾಂತ್ಯದಲ್ಲಿ ಮನೆಗೆ ಬರಲು ಸಾಧ್ಯವಾಗದೇ ಇರಬಹುದು. ಉದ್ಯೋಗದ ಒತ್ತಡವಿರಬಹುದು. ವಿದೇಶದಲ್ಲಿರುವವರು ಇರಬಹುದು. ಅದಕ್ಕಾಗಿಯೇ ತಿಂಗಳಿಗೆ ಕನಿಷ್ಠ ಒಂದು ದಿನವನ್ನು “ಐನ್ ಮನೆ ದಿನ” ವಾಗಿ ಆಚರಿಸುವ ವ್ಯವಸ್ಥೆ ಮಾಡಬಹುದು.

ಆ ದಿನ ಊರಿನಲ್ಲಿರುವವರು, ಹೊರಗಿನಿಂದ ಬರುವವರು ಹಾಗೂ ವಿದೇಶದಲ್ಲಿರುವವರು ವಿಡಿಯೋ ಕಾಲ್ ಮೂಲಕವಾದರೂ ಒಂದೇ ಕುಟುಂಬದಂತೆ ಸೇರಬಹುದು. ಒಂದೇ ಅಡುಗೆಮನೆಯಲ್ಲಿ, ಒಂದೇ ಒಲೆಯಲ್ಲಿ ಅಡುಗೆ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡುವ ಸಂತೋಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆ ದಿನ ಐನ್ ಮನೆಯ ದೀಪ ದಿನವಿಡೀ ಬೆಳಗಲಿ. ಹಿರಿಯರು ಮಕ್ಕಳಿಗೆ ನಮ್ಮ ಪೂರ್ವಜರ ಕಥೆಗಳನ್ನು ಹೇಳಲಿ.

ಇದನ್ನೂಓದಿ:  ‘ಜಮ್ಮ’ ಉಳಿದರೆ ಮಾತ್ರ ಕೊಡಗಿನ ಅಸ್ತಿತ್ವ ಉಳಿಯಲು ಸಾಧ್ಯ… ನಾವೇನು ಮಾಡಬೇಕು?

ನಮ್ಮ ಮನೆತನದ ಇತಿಹಾಸವನ್ನು ಪರಿಚಯಿಸಲಿ. ಯುವಕರಿಗೆ ತೋಟ, ಕೃಷಿ, ಮಣ್ಣು, ಪರಿಸರ ಮತ್ತು ನಮ್ಮ ಬದುಕಿನ ಮೂಲಗಳ ಬಗ್ಗೆ ತಿಳಿಸಲಿ. ಹೀಗೆ ಮಾಡಿದರೆ ಮನೆಗೆ ಮತ್ತೆ ಜನರ ಓಡಾಟ ಆರಂಭವಾಗುತ್ತದೆ. ಬೀಗ ಬಿದ್ದ ಮನೆಗೆ ಮತ್ತೆ ಜೀವ ಬರುತ್ತದೆ. ನಮ್ಮ ಹಿರಿಯರೇ ಐನ್ ಮನೆಯ ನಿಜವಾದ ದೀಪ ಐನ್ ಮನೆಯ ನಿಜವಾದ ದೀಪವೆಂದರೆ ನಮ್ಮ ಹಿರಿಯರು, ಗುರು-ಕಾರಣರು ಮತ್ತು ಪೂರ್ವಜರ ನೆನಪು. ಅವರೇ ನಮ್ಮ ಬೇರಿನ ಕಥೆ. ಅವರೇ ನಮ್ಮ ಸಂಸ್ಕೃತಿಯ ಜೀವಂತ ಪುಸ್ತಕ.

ಉದಾಹರಣೆಗೆ, ನನ್ನ ಅಜ್ಜಿ ಐನ್ ಮನೆಯಲ್ಲಿ ಸುಮಾರು 64 ವರ್ಷಗಳ ಕಾಲ ಅಪೂರ್ವ ಸೇವೆ ಸಲ್ಲಿಸಿದರು. ಪ್ರತಿದಿನ ಕನಿಷ್ಠ 30 ಜನರಿಗೆ, ಹಬ್ಬ-ಹರಿದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಅಡುಗೆ ಮಾಡಿ ಬಡಿಸುತ್ತಿದ್ದರು. ಮನೆಯ ಸದಸ್ಯರಷ್ಟೇ ಅಲ್ಲದೆ, ಕಾರ್ಮಿಕ ವರ್ಗದವರಿಗೂ ಪ್ರತಿದಿನ ಕಾಫಿ ಹಾಗೂ ತಿಂಡಿ ನೀಡುತ್ತಿದ್ದರು. ಅವರ ಸೇವೆಯ ಅವಧಿಯುದ್ದಕ್ಕೂ ಈ ಪರಂಪರೆ ಮುಂದುವರಿದಿತ್ತು. ಅದೇ ರೀತಿ ನನ್ನ ಅಜ್ಜರು ಕುಟುಂಬದ ಹಿರಿಯರೊಂದಿಗೆ ಸೇರಿ ಮನೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಕಾಲಕಾಲಕ್ಕೆ ಒದಗಿಸುತ್ತಿದ್ದರು. ಒಂದು ಇಂಚು ಭೂಮಿಯನ್ನೂ ಬಿಡದೆ ನಾಟಿ ಮಾಡಿ ಭತ್ತ ಬೆಳೆಯುತ್ತಿದ್ದರು.

ಇದನ್ನೂಓದಿ: ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ

ಊರಿಗೆ ಬರುವ ವೈದ್ಯರು, ಪೊಲೀಸ್ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಅನೇಕರು ಇದೇ ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಕುಟುಂಬದ ಹಾಗೂ ಊರಿನ ವಿವಿಧ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಸಂದರ್ಭದಲ್ಲಿ ನನ್ನ ತಾತನೊಂದಿಗೆ ಕುಟುಂಬದ ಹಿರಿಯರೆಲ್ಲರೂ ಭಾಗವಹಿಸುತ್ತಿದ್ದರು. ಅವರು ಕುಟುಂಬದೊಳಗಿನ ವಿಚಾರಗಳಷ್ಟೇ ಅಲ್ಲದೆ, ಊರಿನ ಸಮಸ್ಯೆಗಳಿಗೂ ಹಿರಿಯರ ಮಾರ್ಗದರ್ಶನದ ಮೂಲಕ ನ್ಯಾಯ ಒದಗಿಸುವ ವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತಿದ್ದರು.

ಅಂತಹ ಧೀಮಂತ ಕುಟುಂಬ ವ್ಯವಸ್ಥೆ ನಮ್ಮ ಕೊಡಗಿನಲ್ಲಿ ಇದ್ದದ್ದು ನಮ್ಮ ಹೆಮ್ಮೆ. ಅವರ ತ್ಯಾಗ, ಪರಿಶ್ರಮ ಮತ್ತು ಸೇವೆಯಿಲ್ಲದೆ ಇಂದು ನಾವು ಈ ಮಟ್ಟಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪ್ರತಿ “ಐನ್ ಮನೆ ದಿನ”ದಂದು ಹಿರಿಯರ ಸೇವೆಗೆ ವಿಶೇಷ ಆದ್ಯತೆ ನೀಡಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಅವರ ಅನುಭವವನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಮೊದಲ ಕರ್ತವ್ಯ.

ಹಿರಿಯರನ್ನು ಗೌರವಿಸುವ ಮನೆತನವೇ ನಿಜವಾಗಿ ಬೆಳೆಯುವ ಮನೆತನ. “ಸೇವಾ ನಿಧಿ” — ನಂದಾದೀಪ ನಿರಂತರವಾಗಿ ಬೆಳಗಲಿ ಐನ್ ಮನೆಯಲ್ಲಿ ನಂದಾದೀಪವನ್ನು ನಿರಂತರವಾಗಿ ಬೆಳಗಿಸುವ ಜವಾಬ್ದಾರಿ ಹೊರುವವರಿಗೆ ಕುಟುಂಬದ ವತಿಯಿಂದ ಒಂದು “ಸೇವಾ ನಿಧಿ” ಸ್ಥಾಪಿಸುವ ಕುರಿತು ಚಿಂತಿಸಬಹುದು. ಇದು ಅವರ ನಿಸ್ವಾರ್ಥ ಸೇವೆಗೆ ನೀಡುವ ಗೌರವವಾಗಿರಲಿ. ಅವರ ಜೀವನ ನಿರ್ವಹಣೆಗೆ ಸಾಧ್ಯವಾದಷ್ಟು ನೆರವಾಗಲಿ.

ಇದನ್ನೂಓದಿ: ಕೊಡಗಿನ ವೀರ ಪರಂಪರೆಗೆ ಸಾವಿಲ್ಲ. ಅದು ಹಿಮಾಲಯದಷ್ಟು ಎತ್ತರ, ಕಾವೇರಿಯಷ್ಟು ಪವಿತ್ರ,

ಜೊತೆಗೆ ಐನ್ ಮನೆಯ ನಂದಾದೀಪವೂ ನಿರಂತರವಾಗಿ ಬೆಳಗುತ್ತಿರಲಿ. ಪ್ರತಿ ಕುಟುಂಬವೂ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ವಯಂಪ್ರೇರಣೆಯಿಂದ ಕೊಡುಗೆ ನೀಡಬಹುದು. ಇದು ಯಾರ ಮೇಲೂ ಹೊರೆಯಾಗಬಾರದು; ಸೇವೆಗೆ ಸಲ್ಲಿಸುವ ಗೌರವವಾಗಿರಬೇಕು.

ಐನ್ ಮನೆಯಲ್ಲಿ ಸಾಂಸ್ಕೃತಿಕ ಮೇಳ

ಪ್ರತಿ ಐನ್ ಮನೆಯಲ್ಲೂ ವರ್ಷಕ್ಕೆ ಕನಿಷ್ಠ ಎರಡು ಬಾರಿ ಸಾಂಸ್ಕೃತಿಕ ಮೇಳ ಆಯೋಜಿಸುವಂತಾದರೆ ಅತ್ಯಂತ ಉತ್ತಮ. ಮನೆತನದ ವಿವಿಧ ಕುಟುಂಬಗಳು ಒಂದೆಡೆ ಸೇರಲಿ. ಹಿರಿಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿ. ಯುವಕರು ನಮ್ಮ ಕೊಡವ ನೃತ್ಯ, ಕೋಲು ಕುಣಿತ ಸೇರಿದಂತೆ ನಮ್ಮ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಲಿ. ಮಕ್ಕಳಿಗೆ ನಮ್ಮ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹ ನೀಡಲಿ. ನಮ್ಮ ಮನೆತನದ ಹೆಸರು, ಅದರ ಅರ್ಥ, ಪೂರ್ವಜರ ಇತಿಹಾಸ ಮತ್ತು ನಮ್ಮ ಸಂಸ್ಕೃತಿಯ ವೈಶಿಷ್ಟ್ಯಗಳನ್ನು ಅವರಿಗೆ ಪರಿಚಯಿಸಲಿ.

ಇದನ್ನೂಓದಿ: ಕಾವೇರಿ ನದಿಯನ್ನು ಸಂರಕ್ಷಿಸದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇರಲಾರದು!

ಮನೆತನದ ಸದಸ್ಯರಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಬಹುದು. ಹೀಗೆ ಐನ್ ಮನೆಯನ್ನು ಕೇವಲ ಹಳೆಯ ಕಟ್ಟಡವಾಗಿ ನೋಡದೆ, ನಮ್ಮ ಸಂಸ್ಕೃತಿಯ ಜೀವಂತ ವಸ್ತುಸಂಗ್ರಹಾಲಯವನ್ನಾಗಿ ರೂಪಿಸಬಹುದು.

ಒಗ್ಗಟ್ಟಿನ ಅವನತಿ — ಆತ್ಮಾವಲೋಕನದ ಅಗತ್ಯ

ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲದಲ್ಲಿದ್ದ ಒಗ್ಗಟ್ಟು, ಹಿರಿಯರ ಮಾರ್ಗದರ್ಶನ ಮತ್ತು ಸೇವಾ ಮನೋಭಾವ ನಿಧಾನವಾಗಿ ಕ್ಷೀಣಿಸುತ್ತಿರುವುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಷಯ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ನಮ್ಮ ಬೇರುಗಳಿಂದ ನಾವು ದೂರವಾಗುತ್ತಿರುವುದು. ಮುಂದಿನ ಪೀಳಿಗೆಗೆ ನಮ್ಮ ಕುಟುಂಬ ವ್ಯವಸ್ಥೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವಂತಹ ಹೊಸ ವ್ಯವಸ್ಥೆಗಳನ್ನು ರೂಪಿಸಬೇಕಾಗಿದೆ.

ಕೊಡಗಿನ ವಿವಿಧ ಸಂಘ-ಸಂಸ್ಥೆಗಳು, ವಿಶೇಷವಾಗಿ ಕೊಡವ ಸಮಾಜಗಳು ಹಾಗೂ ಎಲ್ಲಾ ಸಮುದಾಯಗಳ ಸಮಾಜಗಳು ಮತ್ತು ಕುಟುಂಬಗಳ ಆಡಳಿತ ವರ್ಗಗಳು ಇಂತಹ ಹೊಸ ಆಲೋಚನೆಗಳಿಗೆ ಉತ್ತೇಜನ ನೀಡಬೇಕು.“ಐನ್ ಮನೆ ದಿನಾಚರಣೆ”ಯಂತಹ ಕಾರ್ಯಕ್ರಮಗಳು ಬಣಗುಡುತ್ತಿರುವ ಮನೆಗಳಿಗೆ ಜೀವ ತುಂಬಬಹುದು. ಯುವ ಸಮೂಹಕ್ಕೆ ಉತ್ತಮ ಸಂಸ್ಕಾರ ನೀಡಬಹುದು. ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಯುವಜನರನ್ನು ಉತ್ತಮ ದಾರಿಗೆ ಕೊಂಡೊಯ್ಯಬಹುದು.

ಇದನ್ನೂಓದಿ: ನಾನು -ನನ್ನ ಹಿರಿಯರು ಕಲಿತ ಶಾಲೆ.. ಮುಂದಿನ ತಲೆಮಾರುಗಳಿಗೂ ಹೆಮ್ಮೆಯಾಗಿ ಉಳಿಯಲಿ…

ಯುವಕರಲ್ಲಿ ಮಾದಕ ವಸ್ತುಗಳಿಂದ ದೂರವಿರುವ ಮನೋಭಾವ, ಕುಟುಂಬದ ಮೇಲಿನ ಜವಾಬ್ದಾರಿ ಮತ್ತು ಸಮಾಜದ ಮೇಲಿನ ಕಾಳಜಿಯನ್ನು ಬೆಳೆಸಲು ಇಂತಹ ಕುಟುಂಬ ಒಗ್ಗಟ್ಟು ಸಹಕಾರಿಯಾಗಬಹುದು. ಇದು ಕೊಡಗಿನ ವಿವಿಧ ಸಮುದಾಯಗಳ ಮೂಲ ನಿವಾಸಿಗಳೆಲ್ಲರೂ ತಮ್ಮ ತಮ್ಮ ಪರಂಪರೆಯ ಹಿನ್ನೆಲೆಯಲ್ಲಿ ಅಳವಡಿಸಿಕೊಳ್ಳಬಹುದಾದ ಒಂದು ಆಲೋಚನೆ.

200–250 ವರ್ಷಗಳ ಇತಿಹಾಸವನ್ನು ಉಳಿಸೋಣ

ಕೆಲವು ಐನ್ ಮನೆಗಳು 200, 250 ವರ್ಷಗಳಿಗೂ ಮೀರಿದ ಇತಿಹಾಸವನ್ನು ಹೊಂದಿವೆ. ಅಷ್ಟು ವರ್ಷಗಳ ಕಾಲ ಎಷ್ಟು ತಲೆಮಾರುಗಳು ಆ ಮನೆಯಲ್ಲಿ ಹುಟ್ಟಿ ಬೆಳೆದಿರಬಹುದು? ಎಷ್ಟು ನೆನಪುಗಳು, ಎಷ್ಟು ಕಥೆಗಳು, ಎಷ್ಟು ತ್ಯಾಗಗಳು ಮತ್ತು ಎಷ್ಟು ಸಂಸ್ಕೃತಿಯ ಹೆಜ್ಜೆಗುರುತುಗಳು ಆ ಮನೆಯ ಗೋಡೆಗಳೊಳಗೆ ಅಡಗಿರಬಹುದು? ಆದರೆ ಇಂದು ಕೆಲವೆಡೆ ಕೇವಲ ಹಬ್ಬ-ಹರಿದಿನಗಳಲ್ಲಿ ಮಾತ್ರ ನಂದಾದೀಪ ಬೆಳಗಿಸುವ ಪರಿಸ್ಥಿತಿ ಇದೆ.

ಇದನ್ನೂಓದಿ: ಪ್ರತಿ ಮನೆಯಲ್ಲೂ ಒಂದು ಹೋಮ್ ಕ್ಲಿನಿಕ್ ಇರಲಿ …. ಏಕೆ ಗೊತ್ತಾ? 

ಮುಂದಿನ ದಿನಗಳಲ್ಲಿ ಇಂತಹ ಮನೆಗಳು ಸಂಪೂರ್ಣವಾಗಿ ನಿರ್ಜನವಾಗಿ, ನಾಶವಾಗಿ ಹೋದರೆ ಕೇವಲ ಒಂದು ಕಟ್ಟಡವಷ್ಟೇ ಕಳೆದುಹೋಗುವುದಿಲ್ಲ. ನಮ್ಮ ಇತಿಹಾಸದ ಒಂದು ಜೀವಂತ ಅಧ್ಯಾಯವೇ ಕಳೆದುಹೋಗುತ್ತದೆ.ಆದ್ದರಿಂದ ಪ್ರತಿತಿಂಗಳು ಐನ್ ಮನೆಯಲ್ಲಿ ಸೇರುವಂತಹ ಹೊಸ ವ್ಯವಸ್ಥೆಯನ್ನು ಹಿರಿಯರು ಮತ್ತು ಯುವಕರು ಸೇರಿ ರೂಪಿಸುವ ಅಗತ್ಯವಿದೆ.

ತಂತ್ರಜ್ಞಾನವೂ ನಮ್ಮ ಸಂಸ್ಕೃತಿಯ ಸಾಧನವಾಗಲಿ

ಕಾಲ ಬದಲಾಗಿದೆ. ನಮ್ಮ ಜೀವನಶೈಲಿಯೂ ಬದಲಾಗಿದೆ. ಆದರೆ ದೂರದಲ್ಲಿದ್ದರೂ ಮನಸ್ಸಿನಿಂದ ಹತ್ತಿರ ಇರಬಹುದು. ತಂತ್ರಜ್ಞಾನವನ್ನು ನಮ್ಮ ಸಂಸ್ಕೃತಿಯನ್ನು ಉಳಿಸಲು ಬಳಸಿಕೊಳ್ಳಬೇಕು.ವಾಟ್ಸಾಪ್ ಗ್ರೂಪ್, ವಿಡಿಯೋ ಕಾಲ್, ಜೂಮ್ ಮೀಟಿಂಗ್ ಮತ್ತು ಆನ್‌ಲೈನ್ ಕಾರ್ಯಕ್ರಮಗಳು — ಇವೆಲ್ಲವೂ ನಮ್ಮ ಹೊಸ ಸಾಧನಗಳು. ಹಳೆಯದನ್ನು ಸಂಪೂರ್ಣವಾಗಿ ಬಿಟ್ಟುಬಿಡದೆ, ಹೊಸದನ್ನು ಸೇರಿಸಿಕೊಂಡು ಮುಂದೆ ಸಾಗಬೇಕು. ವಿದೇಶದಲ್ಲಿರುವ ಕುಟುಂಬದ ಸದಸ್ಯರೂ ಐನ್ ಮನೆ ದಿನದಂದು ವಿಡಿಯೋ ಮೂಲಕ ಭಾಗವಹಿಸುವಂತಾದರೆ, ಅವರಿಗೂ ತಮ್ಮ ಬೇರುಗಳೊಂದಿಗೆ ಸಂಪರ್ಕ ಉಳಿಯುತ್ತದೆ.

ಯುವಕರೇ ಕಾರ್ಯದ ಮುಂದಿನ ಹೆಜ್ಜೆ

ಈ ಕೆಲಸದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯ. ಹಿರಿಯರು ದಾರಿ ತೋರಿಸುತ್ತಾರೆ; ಆದರೆ ಆ ದಾರಿಯಲ್ಲಿ ನಡೆಯಬೇಕಾದವರು ಯುವಕರು.ಪ್ರತಿ ಮನೆತನದಲ್ಲೂ “ಐನ್ ಮನೆ ರಕ್ಷಣಾ ಸಮಿತಿ” ಯಂತಹ ಸ್ವಯಂಪ್ರೇರಿತ ತಂಡವನ್ನು ರಚಿಸಬಹುದು. ಅವರು ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಿ. ಜವಾಬ್ದಾರಿಗಳನ್ನು ಹಂಚಿಕೊಳ್ಳಲಿ. ಮನೆ ಮತ್ತು ಪರಿಸರದ ನಿರ್ವಹಣೆಗೆ ಸಹಕರಿಸಲಿ. ಖರ್ಚು-ವೆಚ್ಚಗಳನ್ನು ಪಾರದರ್ಶಕವಾಗಿ ನಿರ್ವಹಿಸಲಿ. ಕಾರ್ಯಕ್ರಮಗಳ ಫೋಟೋ, ವಿಡಿಯೋ ಹಾಗೂ ಕುಟುಂಬದ ಇತಿಹಾಸವನ್ನು ದಾಖಲಿಸಲಿ.

ಇದನ್ನೂಓದಿ: ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!

‘ನನಗೆ ಟೈಮ್ ಇಲ್ಲ” ಎನ್ನುವುದಕ್ಕಿಂತ, “ನನ್ನಿಂದ ಏನು ಬೇಕಾದರೂ ಮಾಡಲು ಸಾಧ್ಯ?” ಎಂದು ಕೇಳುವ ಮನೋಭಾವ ನಮ್ಮ ಯುವಕರಲ್ಲಿ ಬರಬೇಕು. “ನನ್ನದು–ನಿನ್ನದು” ಎಂಬ ಗೋಡೆಗಳನ್ನು ಒಡೆಯೋಣ ಇಲ್ಲಿ ಅತ್ಯಂತ ಮುಖ್ಯವಾಗಿ ಮರೆಯಬಾರದ ಒಂದು ವಿಷಯವಿದೆ.“ನನ್ನದು, ನಿನ್ನದು” ಎಂಬ ಗೋಡೆಗಳನ್ನು ಒಡೆದು, “ನಾವೆಲ್ಲರೂ ಒಂದೇ, ನಾವೆಲ್ಲರೂ ಒಂದು ಮನೆತನ” ಎಂಬ ಭಾವನೆಯಿಂದ ಒಂದಾಗಬೇಕು.ಆಸ್ತಿಗಾಗಿ ಜಗಳವಾಡುವುದಕ್ಕಿಂತ, ಇರುವ ಆಸ್ತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವ ದೊಡ್ಡ ಮನಸ್ಸು ಬರಬೇಕು.

ಒಗ್ಗಟ್ಟಿಲ್ಲದೆ ಯೋಜನೆ ಯಶಸ್ವಿಯಾಗುವುದಿಲ್ಲ…

ಐನ್ ಮನೆ ಒಡೆದರೆ ಇಟ್ಟಿಗೆಗಳು ಮಾತ್ರ ಚೆಲ್ಲಾಪಿಲ್ಲಿಯಾಗುವುದಿಲ್ಲ; ಒಂದು ಮನೆತನದ ಇತಿಹಾಸ, ನೆನಪುಗಳು ಮತ್ತು ಸಂಸ್ಕೃತಿಯ ಒಂದು ಭಾಗವೂ ಚೆಲ್ಲಾಪಿಲ್ಲಿಯಾಗುತ್ತದೆ. ನಮ್ಮ ಮಕ್ಕಳಿಗೆ ಮುಂದೆ ತೋರಿಸಲು ನಮ್ಮ ಬೇರುಗಳೇ ಇಲ್ಲದಂತಾಗಬಾರದು. ಆದ್ದರಿಂದ ನಮ್ಮ ಮನೆತನದ ಐನ್ ಮನೆಯ ಬೀಗವನ್ನು ತೆರೆಯೋಣ. ಧೂಳು ತುಂಬಿರುವ ನಂದಾದೀಪವನ್ನು ಮತ್ತೆ ಬೆಳಗಿಸೋಣ. ನಮ್ಮ ಹಿರಿಯರ ನೆನಪುಗಳನ್ನು ಜೀವಂತವಾಗಿರಿಸೋಣ.

ಇದನ್ನೂಓದಿ: ಕಾವೇರಿ ತವರು ಕೊಡಗಿನ ರೈತರಿಗೆ ಮೊದಲು ನ್ಯಾಯ ಕೊಡಿ…ಇಲ್ಲಿನ ಸಮಸ್ಯೆ ಆಲಿಸಿ..!

ಅದು ನಮ್ಮ ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆ. ದೊಡ್ಡ ಬದಲಾವಣೆಗೆ ಸಣ್ಣ ಹೆಜ್ಜೆ ಸಾಕು ಈ ಹೊಸ ರೂಪುರೇಷೆ ಕಷ್ಟದ್ದಲ್ಲ. ಬೇಕಾಗಿರುವುದು ಇಚ್ಛಾಶಕ್ತಿ, ಸಮಯ ಮತ್ತು ಪರಸ್ಪರ ಪ್ರೀತಿ. ಪ್ರತಿ ತಿಂಗಳು ಒಂದೆರಡು ಗಂಟೆ ಸಮಯ ನೀಡಿದರೂ ಸಾಕು. ವರ್ಷಕ್ಕೆ ಕನಿಷ್ಠ ಎರಡು ದಿನ ಎಲ್ಲರೂ ಒಟ್ಟಿಗೆ ಸೇರಿದರೂ ಸಾಕು. ವಾಟ್ಸಾಪ್ ಗ್ರೂಪ್ ರಚಿಸಿ, ಜವಾಬ್ದಾರಿಗಳನ್ನು ಹಂಚಿಕೊಂಡು, ಐನ್ ಮನೆಯ ನಿರ್ವಹಣೆಗೆ ಸಣ್ಣ-ಸಣ್ಣ ಹೆಜ್ಜೆಗಳನ್ನು ಇಟ್ಟರೆ, ಇದೇ ಹೆಜ್ಜೆಗಳು ಮುಂದೆ ದೊಡ್ಡ ಸಾಮಾಜಿಕ ಚಳುವಳಿಯಾಗಿ ಬೆಳೆಯಬಹುದು.ಆದ್ದರಿಂದ ಮೊದಲು ಈ ವಿಚಾರವನ್ನು ನಮ್ಮ ಹಿರಿಯರ ಮುಂದೆ ಇಡೋಣ.

‘ಐನ್ ಮನೆ ದಿನ” ಆಚರಣೆಯನ್ನು ಪ್ರಾರಂಭಿಸೋಣ.

ಮೊದಲು ನಿಮ್ಮ ಮನೆತನದ ಕನಿಷ್ಠ ಹತ್ತು ಜನರೊಂದಿಗೆ ಈ ವಿಚಾರವನ್ನು ಚರ್ಚಿಸಿ. ಅವರ ಸಲಹೆಗಳನ್ನು ಪಡೆದುಕೊಳ್ಳಿ. ಸಾಧ್ಯವಾದದ್ದನ್ನು ಅಳವಡಿಸಿಕೊಳ್ಳಿ. ಒಗ್ಗಟ್ಟಿದ್ದರೆ ಮಾತ್ರ ಬಲ್ಯಮನೆ ಬದುಕುತ್ತದೆ. ಬಲ್ಯಮನೆ ಬದುಕಿದರೆ ಮಾತ್ರ ನಮ್ಮ ಬೇರುಗಳು ಬದುಕುತ್ತವೆ. ನಮ್ಮ ಬೇರುಗಳು ಬದುಕಿದರೆ ಮಾತ್ರ ಕೊಡಗಿನ ಸಂಸ್ಕೃತಿ ಬದುಕುತ್ತದೆ. ಮಾ ಗುರು ಕಾರಣರ ವಿಶ್ಲೇಷಣೆ “ಮಾ ಗುರು ಕಾರಣ” ಎಂಬ ಪದಪ್ರಯೋಗವನ್ನು ನಮ್ಮ ಕುಟುಂಬದ ಮೂಲ ಹಿರಿಯರು ಮತ್ತು ಪೂರ್ವಜರನ್ನು ಗೌರವದಿಂದ ಸ್ಮರಿಸುವ ಅರ್ಥದಲ್ಲಿ ಬಳಸಲಾಗುತ್ತದೆ.

“ಮಾ” — ಮಹತ್ವದ, ಮೂಲದ ಎಂಬ ಭಾವನೆಯನ್ನು ಸೂಚಿಸುವ ಪದ.

“ಗುರು” — ದಾರಿ ತೋರಿಸುವವರು, ಜ್ಞಾನ ನೀಡುವವರು.

“ಕಾರಣ” — ಕುಟುಂಬದ ಅಸ್ತಿತ್ವಕ್ಕೆ ಕಾರಣರಾದ ಮೂಲ ಹಿರಿಯರು ಮತ್ತು ಪೂರ್ವಜರು.

ಇದನ್ನೂಓದಿ: ಕೊಡಗಿನ ಹಾಕಿಯಿಂದ ನಾಟಿ ಓಟದವರೆಗೆ… ಹಳ್ಳಿ ಆಟಕ್ಕೆ ವೇದಿಕೆ ಬೇಕಾಗಿದೆ… 

ನಮ್ಮ ಪರಂಪರೆಯಲ್ಲಿ ಇಂತಹ ಪೂರ್ವಜರನ್ನು ಸ್ಮರಿಸುವುದು ಅತ್ಯಂತ ಮಹತ್ವದ್ದಾಗಿದೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ನೆನಪು, ಮೌಲ್ಯಗಳು, ತ್ಯಾಗ ಮತ್ತು ಸಂಸ್ಕಾರಗಳು ನಮ್ಮ ಕುಟುಂಬದ ಬದುಕಿನಲ್ಲಿ ಮುಂದುವರಿಯುತ್ತವೆ.

ಪ್ರತಿ ಕೊಡವ ಕುಟುಂಬದಲ್ಲೂ ಶುಭಕಾರ್ಯಗಳ ಸಂದರ್ಭದಲ್ಲಿ ತಮ್ಮ ಪೂರ್ವಜರು, ಗುರು-ಕಾರಣರು ಮತ್ತು ಕುಟುಂಬದ ಮೂಲ ಹಿರಿಯರನ್ನು ಸ್ಮರಿಸುವ ಪರಂಪರೆ ಇದೆ. ಹಿರಿಯರಿಗೆ ಗೌರವ ನೀಡುವುದು ಕೇವಲ ಒಂದು ಆಚರಣೆಯಲ್ಲ; ಅದು ನಮ್ಮ ಬೇರುಗಳಿಗೆ ಸಲ್ಲಿಸುವ ಗೌರವ. ಅವರೇ ನಮ್ಮ ಬದುಕಿನ ಅನುಭವದ ಪಾಠಪುಸ್ತಕ. ಅವರೇ ನಮ್ಮ ಕುಟುಂಬದ ಇತಿಹಾಸದ ಜೀವಂತ ನೆನಪು. ಅವರ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ.

ಇದನ್ನೂಓದಿ: ಕೊಡಗಿನ ‘ನಾಳೆ’ ನಮ್ಮ ಕೈಯಲ್ಲಿದೆ…. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ…

ಆದ್ದರಿಂದ ಐನ್ ಮನೆ ದಿನವು ಕೇವಲ ಒಂದು ದಿನದ ಆಚರಣೆಯಾಗದೆ, ನಮ್ಮ ಬೇರುಗಳನ್ನು ನೆನಪಿಸುವ, ಹಿರಿಯರನ್ನು ಗೌರವಿಸುವ, ಕುಟುಂಬವನ್ನು ಒಗ್ಗೂಡಿಸುವ ಮತ್ತು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಒಂದು ನಿರಂತರ ಪ್ರಯತ್ನವಾಗಲಿ. ಜೈ ಕೊಡಗು! ಜೈ ಕಾವೇರಿ ಮಾತೆ! ಜೈ ಮಾ ಗುರು ಕಾರಣ

admin
the authoradmin

Leave a Reply